ಕೊಡಗು ವಿವಿ ವಿಲೀನ ವಿರೋಧಿಸಿ ಪ್ರತಿಭಟನೆ

Published on

ಕುಶಾಲನಗರ: ಕೊಡಗು ವಿಶ್ವವಿದ್ಯಾಲಯ ರದ್ದುಗೊಳಿಸುವ ಸರ್ಕಾರದ ಚಿಂತನೆ ಖಂಡಿಸಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕೊಡಗು ವಿವಿ ಹಿತರಕ್ಷಣಾ ಬಳಗ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿ ಅಭಿವೃದ್ಧಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಕೊಡಗು ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸ್ಥಳೀಯವಾಗಿ ನೀಡಿರುವ ಅವಕಾಶವನ್ನು ರದ್ದುಗೊಳಿಸಬಾರದು. ಸರ್ಕಾರ ಈ ಬಗ್ಗೆ ಪರಿಶೀಲಿಸಿ, ಯಾವುದೇ ಕಾರಣಕ್ಕೂ ಕೊಡಗು ವಿವಿ ರದ್ದುಗೊಳಿಸಬಾರದು. ಇತರ ವಿವಿ ಜತೆ ವಿಲೀನ ಮಾಡಬಾರದು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಕೊಡಗು ವಿವಿ ಹಿತರಕ್ಷಣಾ ಬಳಗದ ಪ್ರಮುಖ ನಟೇಶ್ ಗೌಡ ಮಾತನಾಡಿ, ಕ್ಷೇತ್ರ ಶಾಸಕರ ಮೂಲಕ ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಇರುವ ವಿಶ್ವವಿದ್ಯಾಲಯದ ಹಿತ ರಕ್ಷಣೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ವಿದ್ಯಾರ್ಥಿಗಳು ಕುಶಾಲನಗರ ಗಣಪತಿ ದೇವಾಲಯ ಬಳಿ ಸೇರಿ ಮಾನವ ಸರಪಳಿ ರಚಿಸಿ ವಿಶ್ವವಿದ್ಯಾಲಯ ಉಳಿಸುವಂತೆ ಘೋಷಣೆ ಕೂಗಿದರು. ಈ ಸಂಬಂಧ ಪ್ರಮುಖರು ಮನವಿ ಪತ್ರವನ್ನು ಮುಖ್ಯಮಂತ್ರಿಗೆ ತಾಲೂಕು ತಹಸೀಲ್ದಾರ್ ಮೂಲಕ ಸಲ್ಲಿಸಿದರು.

ಕೊಡಗು ವಿವಿ ಹಿತ ರಕ್ಷಣಾ ಬಳಗದ ಸಂಚಾಲಕ ಕೆ.ಎಸ್.ಕೃಷ್ಣೇಗೌಡ, ಸದಸ್ಯರಾದ ಎಂ.ಎನ್. ಚಂದ್ರಮೋಹನ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಪ್ರಮುಖರಾದ ನವನೀತ್ ಪೊನ್ನೇಟಿ, ಗಂಧರ್ವ ರಿತ್ವಿಕ್, ಕಾರ್ತಿಕ್, ಲಯನ್ ಹಾಗೂ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net