ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ 19ಕ್ಕೆ

Published on

ಸೋಮವಾರಪೇಟೆ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹಾಗೂ ಸಿ ಮತ್ತು ಡಿ(ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ) ಭೂಮಿಯನ್ನು ವ್ಯವಸಾಯ ಭೂಮಿ ಎಂದು ಪರಿವರ್ತಿಸಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಆ.19ರಂದು ಪಟ್ಟಣದಲ್ಲಿ ರೈತರ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಹೋರಾಟ ಸಮಿತಿ ಸಂಚಾಲಕ ಕೆ.ಬಿ.ಸುರೇಶ್ ತಿಳಿಸಿದರು


ಅಂದು ಬೆಳಗ್ಗೆ 10 ಗಂಟೆಗೆ ಒಕ್ಕಲಿಗರ ಸಮುದಾಯ ಭವನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಲಿದ್ದು, ಪಟ್ಟಣದ ಜೇಸಿ ವೇದಿಕೆಯಲ್ಲಿ ಸಮಾವೇಶಗೊಳ್ಳಲಿದೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸಿ ಮತ್ತು ಡಿ ಜಾಗವೆಂದು ಅವೈಜ್ಞಾನಿಕವಾಗಿ ವರ್ಗೀಕರಿಸಿರುವ ಭೂಮಿಯನ್ನು ರಕ್ಷಿತ ಅರಣ್ಯವೆಂದು ಘೋಷಣೆ ಮಾಡಲು ಸರ್ಕಾರ ಮುಂದಾಗಿದೆ. ಅರಣ್ಯ ವ್ಯವಸ್ಥಾಪನ ಸಮಿತಿ ರಚಿಸಲಾಗಿದ್ದು, ಸಮಿತಿಯಿಂದ ರೈತರಿಗೆ ನೋಟೀಸ್ ಜಾರಿಯಾಗುತ್ತಿದೆ. ಸಿ ಮತ್ತು ಡಿ ಭೂಮಿ ರಕ್ಷಿತ ಅರಣ್ಯವೆಂದು ಘೋಷಿಸಿದರೆ ರೈತರು ಬೀದಿಪಾಲಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.


ಶಾಂತಳ್ಳಿ ಹೋಬಳಿಯಲ್ಲಿರುವ ಬಹುತೇಕ ಗ್ರಾಮಗಳಲ್ಲಿ ರೈತರು ಕೃಷಿ ಮಾಡುತ್ತಿರುವ ಭೂಮಿ ಸಿ ಮತ್ತು ಡಿ ಭೂಮಿಯಾಗಿದೆ. ಕಳೆದ ಎರಡು ದಶಕಗಳಿಂದ ಈ ಭೂಮಿಯ ಹಕ್ಕುಪತ್ರಕ್ಕಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಆದರೆ ಕಂದಾಯ ಇಲಾಖೆ, ರಾಜಕಾರಣಿಗಳಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಹೇಳಿದರು.


ಸಿ ಮತ್ತು ಡಿಯ ಸರ್ವೇ ನಂಬರ್‌ಗಳನ್ನು ಮೀಸಲು ಅರಣ್ಯವಾಗಿ ಘೋಷಿಸಲು ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೆ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಸಿ ಮತ್ತು ಡಿ ಸರ್ವೇ ನಂಬರ್‌ಗಳಲ್ಲಿ ಫಾರಂ 50, 53, 57ನಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಒಂದು ತಿಂಗಳೊಳಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ಚೇತನ್, ನತೀಶ್ ಮಂದಣ್ಣ, ಗೌಡಳ್ಳಿ ಪೃಥ್ವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net