ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ

11 svr 01
Published on

ಸವಣೂರ: ಅಂಗವಿಕಲರು ಸರ್ಕಾರದ ಯೋಜನೆ ಪಡೆಯಲು ಅವಶ್ಯವಾಗಿರುವ ಯುಡಿಐಡಿ (ವಿಶಿಷ್ಟ ಗುರುತಿನ ಚೀಟಿ) ಪಡೆಯಲು ತಾಲೂಕು ಆಸ್ಪತ್ರೆಯಲ್ಲಿಯೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಮಾನಸಿಕ ರೋಗಿಗಳ ಪಾಲಕರು ಮಂಗಳವಾರ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂಗವಿಕಲರ ಪರೀಕ್ಷಾ ಶಿಬಿರದಲ್ಲಿ ಮಾನಸಿಕ ರೋಗಿಗಳಿಗೆ ಹಾಗೂ ಅಂಗವಿಕಲರಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳದ ಹಿನ್ನೆಲೆಯಲ್ಲಿ ರೋಗಿಗಳ ಪಾಲಕರು ಹಾಗೂ ಅಂಗವಿಕಲರು ವೈದ್ಯರೊಂದಿಗೆ ವಾಗ್ವಾದ ನಡೆಸಿದರು.

ಜಿಲ್ಲಾಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದ ಶಿಬಿರವನ್ನು ತಾಲೂಕು ಆಸ್ಪತ್ರೆಯಲ್ಲಿ ಆಯೋಜಿಸಬೇಕು ಎಂದು ಸರ್ಕಾರ ಆದೇಶಿಸಿದ್ದರೂ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ಅಂಗವಿಕಲರಲ್ಲಿ ಮಾನಸಿಕ ರೋಗಿಗಳಾಗಿರುವವರು ಸಹ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಅವರಿಗೆ ಜಿಲ್ಲಾ ಆಸ್ಪತ್ರೆಗೆ ತೆರಳಲು ಸೂಚಿಸುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಉತ್ತರ ಪ್ರಾಂತ ಸಕ್ಷಮ ಪ್ರಮುಖ ಈರಯ್ಯ ಹಿರೇಮಠ ಮಾತನಾಡಿ, ತಾಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಹಾಗೂ ಅವಶ್ಯ ವೈದ್ಯಕೀಯ ಸಲಕರಣೆಗಳು ಇಲ್ಲದಿರುವುದು ಹಾಗೂ ಸ್ಥಳೀಯ ವೈದ್ಯಾಧಿಕಾರಿ, ತಜ್ಞ ವೈದ್ಯರಿಗೆ ಶಿಬಿರ ಆಯೋಜನೆ ಕುರಿತು ಸೂಕ್ತ ಮಾಹಿತಿ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ಜಿಲ್ಲಾ ವೈದ್ಯಾಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ ಮಾತನಾಡಿ, ಮಾನಸಿಕ ರೋಗಿಗಳಲ್ಲಿನ ಅಂಗವಿಕಲತೆ ಗುರುತಿಸಲು ಮನೋತಜ್ಞರ ಕೊರತೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ಒಬ್ಬರು ಮಾತ್ರ ಮನೋವೈದ್ಯರಿದ್ದು, ಅವರು ತಿಂಗಳಲ್ಲಿ ಒಂದು ಬಾರಿ ಮಾತ್ರ ಸವಣೂರಿಗೆ ಆಗಮಿಸುತ್ತಾರೆ. ಇದು ಪ್ರಥಮ ಶಿಬಿರ ಆಗಿದ್ದರಿಂದ ಆಡಳಿತ ವ್ಯವಸ್ಥೆಗೆ ತೊಂದರೆಯಾಗಿದೆ. ಮುಂದಿನ ಶಿಬಿರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಶಿಬಿರದಲ್ಲಿ 150ಕ್ಕೂ ಹೆಚ್ಚು ಅಂಗವಿಕಲರು ಪಾಲ್ಗೊಂಡಿದ್ದರು. ಅನಿಲಕುಮಾರ ಹೊಂಬಳದ, ಮಲ್ಲಮ್ಮ ಶಿರಹಟ್ಟಿ, ಪ್ರಶಾಂತ ಚಂದ್ರಾಪಟ್ಟಣ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net