

ಹಾವೇರಿ: ಇಂಧನ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಮಾಗಾವಿ ಪೆಟ್ರೋಲ್ ಬಂಕ್ ಸಮೀಪ ‘ನಾಟ್ ಔಟ್ 100’ ಘೊಷಣೆಯಡಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಲಾಕ್ಡೌನ್ ಸಂದರ್ಭದಲ್ಲಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಹೊತ್ತಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನರನ್ನು ಮತ್ತಷ್ಟು ಸಮಸ್ಯೆಗೆ ದೂಡಲಾಗುತ್ತಿದೆ. ತೈಲಬೆಲೆ ಏರಿಕೆಯಿಂದ ಇತರ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಕಿಡಿಕಾರಿದರು.
ವಿಪ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಕರೊನಾ ಲಾಕ್ಡೌನ್ನಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಈ ಸಮಯದಲ್ಲಿ ಸರ್ಕಾರ ಪೆಟ್ರೋಲ್, ಡೀಸೆಲ್, ವಿದ್ಯುತ್ ದರವನ್ನು ಹೆಚ್ಚಿಸಿದೆ. ಬಿಜೆಪಿಯವರು ಸುಳ್ಳು ಹೇಳುತ್ತ ಜನರ ದಾರಿ ತಪ್ಪಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ತಿಳಿ ಹೇಳಿ ಅರಿವು ಮೂಡಿಸಬೇಕಿದೆ ಎಂದರು.
ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ಮನಮೋಹನ್ ಸಿಂಗ್ ಸರ್ಕಾರ ಒಂದು ರೂಪಾಯಿ ಬೆಲೆ ಹೆಚ್ಚಿಸಿದರೂ ಬಿಜೆಪಿಯವರು ವಿರೋಧಿಸುತ್ತಿದ್ದರು. 2014ರ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಅಚ್ಛೇ ದಿನ್ ಬದಲು ನರಕದ ದಿನಗಳು ಬಂದಿವೆ. ಬಿಜೆಪಿ ಸರ್ಕಾರ ನರಕ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಡಾ. ಪ್ರಕಾಶಗೌಡ ಪಾಟೀಲ ಮಾತನಾಡಿ, ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಅಬಕಾರಿ, ಮಾರಾಟ ತೆರಿಗೆಗಳನ್ನು ಶೇ. 50ರಷ್ಟು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಮಾಜಿ ಸಚಿವರಾದ ಮನೋಹರ ತಹಶೀಲ್ದಾರ, ರುದ್ರಪ್ಪ ಲಮಾಣಿ, ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರಮುಖರಾದ ಡಾ. ಸಂಜಯ ಡಾಂಗೆ, ಡಾ. ಆರ್.ಎಂ. ಕುಬೇರಪ್ಪ, ಈರಪ್ಪ ಲಮಾಣಿ, ಎಂ.ಎಂ. ಮೈದೂರು, ಪ್ರಸನ್ನ ಹಿರೇಮಠ, ಜಯಶ್ರೀ ಶಿವಪುರ, ಶಾಂತಾ ಶಿರೂರ, ರಾಧಾ ಸವಣೂರು, ರೇಣುಕಾ ಪುತ್ರನ್, ವಿಶಾಲಾಕ್ಷಿ ಆನವಟ್ಟಿ ಇತರರಿದ್ದರು.