

ಗುಬ್ಬಿ: ಕಳ್ಳಂಬೆಳ್ಳದ ಕಳ್ಳಂಗೂ ಹೇಳಿದ್ದೀನಿ, ಗುಬ್ಬಿ ಕಳ್ಳಂಗೂ ಹೇಳಿದ್ದೀನಿ. ಹೀಗೆಂದು ಪರೋಕ್ಷವಾಗಿ ಟಿ.ಬಿ.ಜಯಚಂದ್ರ, ಎಸ್.ಆರ್.ಶ್ರೀನಿವಾಸ್‌ರನ್ನು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಹರಿಹಾಯ್ದರು.
ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವಂತೆ ಕಾಂಗ್ರೆಸ್ ಶಾಸಕರಾದ ಜಯಚಂದ್ರ, ಶ್ರೀನಿವಾಸ್‌ಗೆ ಹೇಳಿದ್ದೀನಿ. ಅವರಿಬ್ಬರು ಜಿಲ್ಲೆಗೆ ಆಗುತ್ತಿರುವ ಅನ್ಯಾಯ ಕಂಡು ಸುಮ್ಮನಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಡಿ.ರಾಂಪುರ ಬಳಿ ಹೇಮೆ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಸ್ಥಗಿತಗೊಳಿಸುವಂತೆ ನಮ್ಮ ನೀರು , ನಮ್ಮ ಹಕ್ಕು ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ಎಂಟಿಕೆ, ಪೊಲೀಸ್‌ನವರಿಗೆ ಹೇಳುತ್ತೀನಿ, ನೀವ್ಯಾರು ನಮಗೆ ತೊಂದರೆ ಕೊಡಬೇಡಿ. ನಾವು ನಾಲೆ ಮುಚ್ಚಿಸಿಕೊಂಡು ಹೋಗುತ್ತೇವೆ. ಏಯ್... ದಿಲೀಪ ಜೆಸಿಬಿ ತರ್ಸೋ, ಬೇಕಿದ್ದರೆ ನಮ್ಮನ್ನು ಬಂಧಿಸಲಿ ಎಂದು ಗುಡುಗಿದರು.
ಹೇಮಾವತಿ ನಮ್ಮದು ಎಂದು ಘೋಷಣೆ ಕೂಗಿದಲ್ಲದೆ, ಜೋರಾಗಿ ಕೂಗಿರೋ, ಸಿದ್ದರಾಮಯ್ಯನ ಪಂಚೆ ಅಲ್ಲಾಡ್ಬೇಕಲ್ಲ ಎಂದು ಪ್ರತಿಭಟನಾಕಾರರಲ್ಲಿ ಹೋರಾಟದ ಕಿಚ್ಚು ತುಂಬಿದರು. ಇಲ್ಲಿ ಸಾಗರೋಪಾದಿಯಲ್ಲಿ ರೈತರು ಬಂದಿದ್ದಾರೆ. ರೈತರೇ ನಮ್ಮ ಶಕ್ತಿ, ಅವರಿಲ್ಲ ಅಂದರೆ ನಮ್ಮ ಬೇಳೆಕಾಳು ಏನು ಆಗುವುದಿಲ್ಲ. ಇದು ನಮ್ಮ ಜಿಲ್ಲೆಯ ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದೆ. 15 ದಿನಗಳಿಂದ ಚರ್ಚೆ ನಡೆಸಿ ಪ್ರತಿಯೊಬ್ಬ ರೈತರಲ್ಲಿ ಮನವರಿಕೆ ಮಾಡಲಾಗಿದೆ. ಹೋರಾಟದ ಕೆಚ್ಚು ಇಲ್ಲಿ ಆಗಬೇಕು ಎಂದರು.
ಸರ್ಕಾರ ಬರುತ್ತೆ ಹೋಗುತ್ತೆ. ಜನರಿಗೆ ಅನ್ಯಾಯ ಮಾಡಿದ ಯಾವುದೇ ಸರ್ಕಾರಕ್ಕೆ ಉಳಿದಿಲ್ಲ. ಹಲವು ನಾಯಕರು ಹೋರಾಟದ ವಿಷಯದಲ್ಲಿ ಜೈಲಿಗೆ ಹೋಗಿಬಂದಿದ್ದಾರೆ. ನಾನು ಇನ್ನು ಜೈಲಿಗೆ ಹೋಗಿಲ್ಲ. ಜೈಲಿಗೆ ಹೋಗಲು ಸಿದ್ಧನಿದ್ದೇನೆ. ನಮ್ಮ ಹೋರಾಟ ಹೇಮಾವತಿ ನೀರಿಗಾಗಿ. ಎಲ್ಲಾ ಮಠಾಧೀಶರು ನಮ್ಮ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಮಠಾಧೀಶರನ್ನ ಬಂಧಿಸಲಿಕ್ಕೆ ಆಗುವುದಿಲ್ಲ. ಯಾಕಂದರೆ ಎಲ್ಲಾ ಊರಲ್ಲಿ ಭಕ್ತರು ರೊಚ್ಚಿಗೆಳ್ತಾರೆ. ಕಳ್ಳರ ಪರ ಪೊಲೀಸರು ನಿಲ್ಲಬೇಡಿ. ಎಷ್ಟೋ ಜನ ನೀರನ್ನ ತರಲು ತಮ್ಮ ಪ್ರಾಣ ಬಿಟ್ಟಿದ್ದಾರೆ. ರೈತರು ಈಗ ಯೋಚನೆ ಮಾಡಬೇಕು. ರೈತ ಪರ ನಿಲ್ಲುವ ಜನನಾಯಕನನ್ನ ಗೆಲ್ಲಿಸಬೇಕು. ದುಡ್ಡು ಹೊಡೆದುಕೊಂಡು ಮನೆಲಿ ಇರೋರನ್ನಲ್ಲ ಎಂದು ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡರು.
ರೈತರ ಜಮೀನು ಇನ್ನು ಸ್ವಾಧೀನ ಪಡಿಸಿಕೊಂಡಿಲ್ಲ. ಆದರು ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲು ಜೆಸಿಬಿ ತನ್ನಿ ಇವತ್ತೆ ಮುಚ್ಚಿಸೋಣಾ. ಇದು ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ. ಇದೇನು ಇವರಪ್ಪನದಾ ಜಮೀನು. ಜೆಸಿಬಿಗೆ ಅವಕಾಶ ಕೊಟ್ಟಿಲ್ಲ ಅಂದ್ರೆ ಗುದ್ದಲಿ ತನ್ನಿ ಎಲ್ಲಾ ಸೇರಿ ಮುಚ್ಚಿಹಾಕೋಣಾ. ಈ ದರಿದ್ರ ಕಾಂಗ್ರೆಸ್ ಸರ್ಕಾರ ಬರುವಾಗಲೇ ತಲೆ ಮೇಲೆ ದರಿದ್ರ ಹೊತ್ತುಕೊಂಡು ಬರುತ್ತೆ ಎಂದು ಹರಿಹಾಯ್ದರು.
ಕಾಂಗ್ರೆಸ್ಸಿಗರಿಗೆ ತಾಕತ್ ಇದ್ದರೆ ಮೇಕೆದಾಟು ಯೋಜನೆ ಮಾಡಿ. ತಮಿಳುನಾಡಿನವರನ್ನು ಕಂಡರೆ ಭಯ ನಿಮಗೆ. ಯಾಕೆಂದರೆ ಅವರು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಕೈ ಹಾಕಿದರೆ ರಾಹುಲ್ ಗಾಂಧಿ ಕಡೆಯಿಂದ ಫೋನ್ ಮಾಡಿಸುತ್ತಾರೆ. ಪಂಚೆ ಸಿದ್ದರಾಮಣ್ಣಗೆ. ಇದು ನಮ್ಮ ನೀರು, ನಮ್ಮ ಹಕ್ಕು ಅನ್ನುವುದು ಗೊತ್ತಿಲ್ಲವೇ. ಇಲ್ಲಿ ನರಸತ್ತ ಕಾಂಗ್ರೆಸ್ ನಾಯಕರು ಇದ್ದಾರೆ. ಅವರನ್ನು ಹೇಳುವರು, ಕೇಳವರು ಇಲ್ಲ. ಎಂ.ಟಿ.ಕೃಷ್ಣಪ್ಪ ಜೆಡಿಎಸ್ ಶಾಸಕ