

ತುಮಕೂರು: ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ವಿವಿಧ ಕನ್ನಡಪರ, ರೈತ ಸಂಘಟನೆಗಳ ಕಾರ್ಯಕರ್ತರು ತುಮಕೂರು ನಗರದ ಟೌನ್‌ಹಾಲ್ ವೃತ್ತದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅಣಕು ಶವಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ನೇತೃತ್ವದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅಣಕು ಶವಯಾತ್ರೆ ನಡೆಸಿ ಮಾಗಡಿ ತಾಲೂಕಿಗೆ ಹೇಮಾವತಿ ನೀರು ಕೊಂಡೊಯ್ಯುವ ಸಲುವಾಗಿ ಕೈಗೊಂಡಿರುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಸರ್ಕಾರ ಕೈ ಬಿಡುಬೇಕು. ರಕ್ತ ಕೊಟ್ಟೇವು ಯಾವುದೇ ಕಾರಣಕ್ಕೂ ಒಂದು ಹನಿ ನೀರನ್ನು ಸಹ ಬಿಡೆವು ಎಂದು ಘೋಷಣೆಗಳನ್ನು ಕೂಗಿದರು.
ಶವಯಾತ್ರೆ ಬಳಿಕ ಆ್ಯಂಬ್ಯುಲೆನ್ಸ್ ನಲ್ಲಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಆರಂಭಿಸಿರುವ ಡಿ. ರಾಂಪುರಕ್ಕೆ ಕೊಂಡೊಯ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಅಲ್ಲಿ ಹೇಮಾವತಿ ನಾಲೆಗೆ ಎಸೆದು ಮಣ್ಣು ಮುಚ್ಚುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ಹೋರಾಟದಲ್ಲಿ ಕನ್ನಡ ಪ್ರಕಾಶ್, ಉದಯ್, ಸಂತೋಷ್, ಮೀಸೆ ಸತೀಶ್, ಬಾಲಕೃಷ್ಣ, ರಾಮಚಂದ್ರರಾವ್, ಶಬ್ಬೀರ್ ಮತ್ತಿತರರು ಪಾಲ್ಗೊಂಡಿದ್ದರು.
ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ 900 ಕೋಟಿ ರೂ., ಮೊತ್ತದ್ದಾಗಿದೆ. ಪೈಪ್‌ಲೈನ್ ಮುಖಾಂತರ ಹಣ ಮಾಡುವ ಹುನ್ನಾರ ಈ ಯೋಜನೆ ಅನುಷ್ಠಾನದಲ್ಲಿ ಅಡಗಿದೆ. ರೈತರಿಗೆ ನೋಟಿಸ್ ಸಹ ಕೊಡದೆ ಕಾಮಗಾರಿ ಆರಂಭಿಸಿದ್ದು ರೈತರಿಗೆ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಅಕ್ರಮವಾಗಿ ಕಾಮಗಾರಿ ಕೈಗೊಂಡಿರುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ತುಮಕೂರು ಬಂದ್‌ಗೆ ಕರೆ ಕೊಡಲಾಗುವುದು.ಧನಿಯಾಕುಮಾರ್ಕನ್ನಡ ಸೇನೆ ಅಧ್ಯಕ್ಷ