ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿರುದ್ಧ ಪ್ರತಿಭಟನೆ

protest magadi
Published on

ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ - ಮೃತನ ಕುಟುಂಬಸ್ಥರ ಆರೋಪ

ಮಾಗಡಿ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಂಡದ ಹೆಸರಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಬೇಸತ್ತು ಇಲಾಖೆ ಕಚೇರಿ ಎದುರಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಿರುಮಲೆಯ ನಿವಾಸಿ ಲಾರಿ ಚಾಲಕ ಸಿ.ನಾಗೇಶ್​ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಲಾರಿ, ಆಟೋ, ಟ್ರ್ಯಾಕ್ಟರ್ ​ ಚಾಲಕರು ಹಾಗೂ ಕುಟುಂಬಸ್ಥರು ಪಟ್ಟಣದ ಹೋಸಪೇಟೆ ವೃತ್ತದಲ್ಲಿ ಶವವಿದ್ದ ಆಂಬುಲೆನ್ಸ್​ ನಿಲ್ಲಿಸಿಕೊಂಡು ರಸ್ತೆ ತಡೆದು ಆಕ್ರೋಶ ಹೊರಹಾಕಿದರು. ಘಟನೆ ತಿಳಿದ ಕೂಡಲೇ ಪೊಲೀಸ್​ ಇನ್​ಸ್ಪೆಕ್ಟರ್​ ಜಿ.ವೈ.ಗಿರಿರಾಜು ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿದರು.

ಮೃತನ ಪತ್ನಿ ಶ್ವೇತಾ ರಾಣಿ ಮಾತನಾಡಿ, ಸಾಲ ಮಾಡಿ ಕಳೆದ ಒಂದು ವರ್ಷದ ಹಿಂದೆ ಲಾರಿ ಖರೀದಿಸಿದ್ದರು. ಜಲ್ಲಿಗಳನ್ನು ಸಾಗಾಣಿಕೆ ಮಾಡಿ ಜೀವನ ನಡೆಸುತ್ತಿದ್ದೆವು. ಏಕಾಏಕಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಲಾರಿ ಜಪ್ತಿ ಮಾಡಿ 8 ಲಕ್ಷ ರೂ. ದಂಡ ಕಟ್ಟುವಂತೆ ಕಿರುಕುಳ ನೀಡಿದರು. ಲಾರಿಯನ್ನು ಬಿಡುಗಡೆಗೊಳಿಸಿ ಕಾಲಾವಕಾಶ ನೀಡಿ, ಆ ದಂಡದ ಹಣವನ್ನು ಕಟ್ಟುವುದಾಗಿ ಅಧಿಕಾರಿಗಳಿಗೆ ತಿಳಿಸಿದರೂ ಸಂಪೂರ್ಣ ದಂಡದ ಹಣ ಕಟ್ಟುವಂತೆ ಕಿರುಕುಳ ನೀಡಿದ್ದಕ್ಕೆ ಪತಿ ಸಿ.ನಾಗೇಶ್​ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ಸಾವಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೆ ಕಾರಣರಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಲಾರಿ ಮಾಲೀಕರಿಗೆ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ಇದರಿಂದ ನಮ್ಮ ಕುಟುಂಬ ಬೀದಿಗೆ ಬರುವಂತಾಗಿದೆ. ಸರ್ಕಾರ ಲಾರಿ ಮಾಲೀಕರಿಗೆ ಸೂಕ್ತ ಭದ್ರತೆ ನೀಡಿ, ನಮ್ಮ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಪಟ್ಟಣದ ತಟವಾಳು ರಸ್ತೆಯ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಪ್ರತಿಭಟನೆಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ನಂತರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.

ಮುಖಂಡರಾದ ರಮೇಶ್​, ಚಿಕ್ಕಣ್ಣ, ನರಸೇಗೌಡ, ಚಂದ್ರು, ಶಂಕರ್​ ಸಿಂಗ್​, ಪುರುಷೋತ್ತಮ್​, ಗಂಗರಾಜು, ಪರಮೇಶ್​,ನಾಗರಾಜು, ಹುಲ್ಲೂರಯ್ಯ, ಕಲೀಂ, ಹೇಮಂತ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net