

ತುಮಕೂರು: ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಹಿಂದು ದೇವಾಲಯಗಳ ಧ್ವಂಸದಂತಹ ಕೃತ್ಯಗಳನ್ನು ಖಂಡಿಸಿ ಬುಧವಾರ ನಗರದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರು, ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಹಿಂದು ಹಿತರಕ್ಷಣಾ ವೇದಿಕೆವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಗೆ ಸಿದ್ದಲಿಂಗ ಶ್ರೀಗಳು ಚಾಲನೆ ನೀಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಮಾಜಿ ಸಚಿವ ಸೊಗಡುಶಿವಣ್ಣ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಿದ್ದಲಿಂಗಶ್ರೀಗಳು, ದಯವೇ ಧರ್ಮದ ಮೂಲವಯ್ಯ ಎಂದು ಹೇಳುವ ಭೂಮಿ ಭಾರತ. ಶಾಂತಿ, ನೆಮ್ಮದಿಯ ತಾಣ. ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಹಿಂಸಾತ್ಮಕ ಕೃತ್ಯಗಳು ಖಂಡನೀಯ. ಅಲ್ಲಿ ನೆಲಸಿರುವ ಭಾರತೀಯ ರಕ್ಷಣೆಗೆ ನಮ್ಮ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ನಮ್ಮದು ಸರ್ವಜನಾಂಗದ ಶಾಂತಿಯ ತೋಟ ಭಾರತ. ಎಲ್ಲರನ್ನು ಪ್ರೀತಿಸುವ ಬಾಂಗ್ಲಾದಲ್ಲಿ ನೆಲೆಸಿರುವ ಹಿಂದುಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಬಾಂಗ್ಲಾ ಸರ್ಕಾರ ಹಿಂದುಗಳನ್ನು, ಅವರ ಆಸ್ತಿಪಾಸ್ತಿ, ಸ್ವಾತಂತ್ರ್ಯವನ್ನು ರಕ್ಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಮಧ್ಯಪ್ರವೇಶಿಸಿ ಹಿಂದುಗಳ ರಕ್ಷಣೆಗೆ ಮುಂದಾಗಬೇಕು. ಅಲ್ಲಿನ ಹಿಂದುಗಳು ಶಾಂತಿಯಿಂದ ಬಾಳುವ ವಾತಾವರಣ ಕಲ್ಪಿಸಲು ನೆರವಾಗುವಂತೆ ಸರ್ಕಾರದ ಒತ್ತಡ ಹೇರಬೇಕಿದೆ ಎಂದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಕ್ಷಮ್ಯ. ಇದೊಂದು ಆಘಾತಕಾರಿ ಬೆಳವಣಿಗೆ. ಪ್ರಪಂಚದಲ್ಲಿ ಎಲ್ಲೆ ವಿನಾ@ಕಾರಣ ನರಮೇಧ ನಡೆದರೆ ಭಾರತೀಯರು ಸುಮ್ಮನಿರಲು ಸಾಧ್ಯವಿಲ್ಲ. ನಾವೆಲ್ಲಾ ಸಂಟಿತರಾಗಿ ಇದನ್ನು ತಡೆಗಟ್ಟಬೇಕಿದೆ. ಇಂತಹ ಅಮಾನವೀಯ ದುಷತ್ಯ ಖಂಡಿಸಿ ಇಡೀ ಜಗತ್ತಿನಲ್ಲೇ ಸಂದೇಶ ರವಾನಿಸುವುದು ಈ ಪ್ರತಿಭಟನೆಯ ಉದ್ದೇಶ. ಭಾರತವು ಪ್ರಪಂಚಕ್ಕೆ ಹಿರಿಯಣ್ಣನಾಗಿ ಶಾಂತಿ, ಸುಖ, ಸಮಾಧಾನವನ್ನು ನೀಡುತ್ತಿದೆ ಎಂದರು.
ಡಿಸಿಗೆ ಮನವಿ: ನಗರದ ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಬಾಂಗ್ಲಾ ಹಿಂದುಗಳನ್ನು ರಸುವಂತೆ ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ತಂಗನಹಳ್ಳಿ ಮಠದ ಬಸವ ಮಹಾಲಿಂಗ ಸ್ವಾಮೀಜಿ, ರಾಮೇನಹಳ್ಳಿ ಮಠದ ಶ್ರೀ ಶಿವಪಂಚಾಕ್ಷರಿ ಸ್ವಾಮೀಜಿ, ಇಸ್ಕಾನ್ನ ಸ್ವಯಂ ಪ್ರಕಾಶ್ ಶ್ರೀಗಳು, ಹಿಂದು ಜಾಗರಣ ವೇದಿಕೆ ಸಂಚಾಲಕ ಜಿ.ಕೆ.ಶ್ರೀನಿವಾಸ್, ಬಜರಂಗದಳದ ಮಂಜುಭಾರ್ಗವ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ನಗರಾಧ್ಯಕ್ಷ ಟಿ.ಎಚ್.ಹನುಮಂತರಾಜು, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್.ಚೇತನ್, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ವೈ.ಎಚ್.ಹುಚ್ಚಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಧನಿಯಾಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಹುಟ್ಟುತ್ತ ಸಹೋದರರು, ಬೆಳೆಯುತ್ತ ದಾಯಾದಿಗಳು ಎಂಬಂತಾಗಿದೆ ಪಾಕಿಸ್ತಾನ ಮತ್ತು ಬಂಗ್ಲಾದೇಶದ ಪರಿಸ್ಥಿತಿ. ಈ ಎರಡೂ ದೇಶಗಳು ನಮ್ಮ ದೇಶಕ್ಕೆ ಮಗ್ಗಲು ಮುಳ್ಳುಗಳಿದ್ದ ಹಾಗೆ. ಈ ದೇಶಗಳ ಮೇಲೆ ಅದೆಷ್ಟೇ ಪ್ರೀತಿ, ವಿಶ್ವಾಸ, ಔದಾರ್ಯ ತೋರಿದರೂ ಅದು ಹಾವಿಗೆ ಹಾಲೆರೆದಂತೆ, ಗುಡ್ಡಕ್ಕೆ ಕಲ್ಲು ಹೊತ್ತಂತೆ, ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತೆ. ಹೋಮಕ್ಕೆ ತುಪ್ಪ ಸುರಿದಂತೆ, ದಂಡಪಿಂಡಗಳಿಗೆ ಕಾಯಕವೇ ಕೈಲಾಸ ಎಂದು ಹೇಳಿದಂತೆ. ಇವೆರಡೂ ದಯೆಗೆ ಅಲ್ಲ, ""ದಂಡಂ ದಶಗುಣಂ' ನೀತಿಗೆ ಮಾತ್ರ ಬಗ್ಗುತ್ತವೆ. ನೆರೆಮನೆಯ ಬೆಂಕಿಯ ವಿಷಯದಲ್ಲಿ ನಾವು ಯಾವಾಗಲೂ ಹುಷಾರಾಗಿರಬೇಕು. ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಿರೇಮಠಾಧ್ಯಕ್ಷರು, ತುಮಕೂರು