

ಹೊಳೆನರಸೀಪುರ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ತಾಲೂಕಿನ ಹಿಂದು ಹಿತರಕ್ಷಣಾ ಸಮಿತಿ ಹಾಗೂ ಹಿಂದುಪರ ಸಂಘಟನೆಗಳಿಂದ ಸೋಮವಾರ ಮಾನವ ಸರಪಳಿ ನಿರ್ಮಿಸಿ, ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ವೇಳೆ ಮಾತನಾಡಿದ ಹಿಂದು ಹಿತರಕ್ಷಣಾ ವೇದಿಕೆ ಮುಖಂಡ ಅಮಿತ್, ಬಾಂಗ್ಲಾದೇಶದಲ್ಲಿ ಹಿಂದೆ ಹಿಂದುಗಳ ಸಂಖ್ಯೆ ಶೇ.24 ರಷ್ಟು ಇತ್ತು. ಈಗ ಕೇವಲ ಶೇ.7 ರಷ್ಟಿದೆ. ಹಿಂದು ಹೆಣ್ಣು ಮಕ್ಕಳು ಹಾಗೂ ಪುಟ್ಟ ಕಂದಮ್ಮಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಅಲ್ಲದೇ ದೇವಾಲಯಗಳನ್ನು ನೆಲಸಮಗೊಳಿಸುತ್ತಿದ್ದಾರೆ.
ಪ್ರಪಂಚದಾದ್ಯಂತ ಕ್ರಿಶ್ಚಿಯನ್, ಮುಸಲ್ಮಾನರಿಗೆ ಅವರದೇ ಆದ ದೇಶಗಳಿವೆ. ಹಿಂದುಗಳನ್ನು ರಕ್ಷಣೆ ಮಾಡುತ್ತಿರುವ ದೇಶ ಎಂದರೆ ಅದು ಭಾರತ. ಹಿಂದುಗಳು ಅಲ್ಪಸಂಖ್ಯಾತರಾಗಿ ಇಂದು ಬಾಂಗ್ಲಾದೇಶದಲ್ಲಿದ್ದಾರೆ. ಅವರ ರಕ್ಷಣೆಗೋಸ್ಕರ ಭಾರತೀಯರಾದ ನಾವು ಒಗ್ಗೂಡಬೇಕು. ಹಿಂದು ಹಿತರಕ್ಷಣಾ ಸಮಿತಿಯು ರಕ್ಷಣೆಗಾಗಿ ಜಾಥಾ ಮಾಡುತ್ತಾ ಜಾಗೃತಿ ಕೆಲಸ ಮಾಡುತ್ತಿದ್ದು, ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಜಯ ಚಾಮರಾಜೇಂದ್ರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬಾಂಗ್ಲಾದೇಶದ ದಾಳಿಕೋರರ ವಿರುದ್ಧ ಪ್ರತಿಭಟಿಸಲಾಯಿತು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಮಳಲಿ ನಾರಾಯಣಗೌಡ, ಮುಖಂಡರಾದ ಜಿ. ದೇವರಾಜೇಗೌಡ, ಪಟಾಭಿರಾಮ, ವಕೀಲ ರಾಮ ಪ್ರಸನ್ನ, ಭಗವಾನ್, ಬ್ರಾಡ್ ವೇ ದಯಾನಂದ, ನಾಗಲಾಪುರದ ಕೃಷ್ಣಕುಮಾರ್ ಸೇರಿದಂತೆ ಹಿಂದುಪರ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.