ಕೇಂದ್ರ ಸಚಿವ ಅಮಿತ್ ಷಾ ರಾಜೀನಾಮೆಗೆ ಪಟ್ಟು

mgd
Published on

ಮಾಗಡಿ  : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅಮಿತ್ ಷಾ ಅವರ ಪ್ರತಿಕೃತಿ ದಹಿಸಿ ತಹಸೀಲ್ದಾರ್ ಶರತ್ ಕುಮಾರ್‌ಗೆ ಮನವಿ ಸಲ್ಲಿಸಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡುವವರ ನಾಲಿಗೆ ಕತ್ತರಿಸುವ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಎಚ್ಚರಿಕೆ ಕೊಡುವ ಕೆಲಸ ಆರಂಭವಾಗಿದೆ. ಭಾರತೀಯ ಜನತಾ ಪಾರ್ಟಿ, ಆರ್‌ಎಸ್‌ಎಸ್ ನವರ ನಿಜವಾದ ಮನಸ್ಥಿತಿ ಏನು ಅನ್ನುವುದು ಬಹಿರಂಗವಾಗಿದೆ ಎಂದು ಲೇವಡಿ ಮಾಡಿದರು. ಅಂಬೇಡ್ಕರ್ ಕುರಿತು ಅಮಿತ್ ಷಾ ಕೇವಲವಾಗಿ ಮಾತನಾಡಿರುವುದನ್ನು ದೇಶದ ಪ್ರತಿಯೊಬ್ಬ ಬಡವರು ಹಾಗೂ ಪಕ್ಷಾತೀತವಾಗಿ ಬೀದಿಗಿಳಿದು ಹೋರಾಟ ನಡೆಸಬೇಕು ಎಂದರು. ಪ್ರಧಾನಿ ಮೋದಿ ಕೂಡಲೇ ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಬೇಕು, ವಜಾಗೊಳಿಸುವವರೆಗೂ ದೇಶವ್ಯಾಪಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂಬ ಎಚ್ಚರಿಸಿದರು.

ಮತದ ಆಸೆಗೊಸ್ಕರ ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುವ ಬಿಜೆಪಿಯಿಂದ ದೇಶದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಅಮಿತ್ ಷಾ ಅವರ ವಿರುದ್ಧ ಹೋರಾಟವನ್ನು ಮಾಗಡಿಯಿಂದಲೇ ಪ್ರಾರಂಭ ಮಾಡುತ್ತಿದ್ದೇವೆ. ಕೇವಲ ಜಾತಿಗೆ ಅಂಬೇಡ್ಕರ್ ಸೀಮಿತವಾಗಿಲ್ಲ, ಅವರು ಪ್ರತಿಯೊಬ್ಬರಿಗೂ ಸೇರಿದವರು, ಯಾರು ಅಂಬೇಡ್ಕರ್ ಅವರನ್ನು ವಿರೋಧ ಮಾಡುತ್ತಾರೋ ಅವರನ್ನು ರಾಜ್ಯ, ದೇಶದಿಂದ ಗಡಿಪಾರು ಮಾಡಬೇಕು ಎಂದು ಹೋರಾಡಬೇಕಿದೆ ಎಂದರು.

ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಎಚ್.ಎನ್.ಅಶೋಕ್ ಮಾತನಾಡಿ, ಅಂಬೇಡ್ಕರ್ ಕೊಟ್ಟ ಬುನಾದಿಗೆ ಆಪತ್ತು ಬಂದಿದೆ. ನಮ್ಮ ಹಕ್ಕು ನಮ್ಮ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವಂತಹ ಮಾತನಾಡಿರುವ ಅಮಿತ್ ಷಾ ಅವರನ್ನು ದೇಶದ ಜನತೆ ಧಿಕ್ಕರಿಸಬೇಕು. ಮನುವಾದಿಗಳ ಕೆಟ್ಟ ಸಂಸ್ಕೃತಿಯನ್ನು ಕಿತ್ತು ಹಾಕಲು ಕಂಕಣಬದ್ಧರಾದ ಅಂಬೇಡ್ಕರ್ ಬಗ್ಗೆ ಮಾತನಾಡಿರುವುದು ದೇಶದ ದುರಂತ ಎಂದರು.

ಪಟ್ಟಣದ ಕಲ್ಯಾಗೇಟ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಡಾ.ರಾಜ್ ಕುಮಾರ್ ರಸ್ತೆಯಿಂದ ಡಾ.ಶಿವಕುಮಾರ್ ವೃತ್ತ, ಖಾಸಗಿ ಬಸ್ ನಿಲ್ದಾಣ ಮೂಲಕ ಪುರಸಭೆ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿತು. ತಾಲೂಕು ಕಚೇರಿ ಮುಂದೆ ಅಮಿತ್‌ಷಾ ಭಾವ ಚಿತ್ರ ಇರುವ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್ ಶರತ್ ಕುಮಾರ್‌ಗೆ ಸಾವಿರಾರು ಮಂದಿ ತೆರಳಿ ಮನವಿ ಸಲ್ಲಿಸಿದರು.

ಬಮುಲ್ ನಿರ್ದೇಶಕ ನರಸಿಂಹಮೂರ್ತಿ, ಜೆಪಿ.ಚಂದ್ರೇಗೌಡ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಕುಮಾರ್, ತಾಪಂ ಮಾಜಿ ಅಧ್ಯಕ್ಷ ಜಿ.ಕೃಷ್ಣ, ಮಾಜಿ ಸದಸ್ಯ ಸಿ.ಜಯರಾಮು, ಶಿವರಾಜು, ರವಿಕುಮಾರ್, ಮಂಜೇಶ್, ರತ್ನಮ್ಮ ಶ್ರೀನಿವಾಸ್, ಸುಮಾ ರಮೇಶ್, ಸಿ.ಎಂ.ಮಾರೇಗೌಡ, ಪುರಸಭಾಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net