ವಕ್ಫ್ ಹೆಸರಿಗೆ ಆಸ್ತಿ ನೋಂದಣಿಗೆ ವಿರೋಧ ; ಜಿಲ್ಲಾ, ತಾಲೂಕು, ನಗರ ಬಿಜೆಪಿ ಘಟಕಗಳ ನೇತೃತ್ವದಲ್ಲಿ ಪ್ರತಿಭಟನೆ ; ಕಾಂಗ್ರೆಸ್ ಸರ್ಕಾರದ ನಡೆಗೆ ಆಕ್ರೋಶ

protest
Published on

ರಾಮನಗರ: ರೈತರು ಹಾಗೂ ಹಿಂದು ಮಠಮಂದಿರಗಳ ಆಸ್ತಿಯನ್ನು ವಕ್ಫ್ ಮಂಡಳಿ ಹೆಸರಿಗೆ ಆಸ್ತಿ ನೋಂದಾಯಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ರಾಮನಗರ ಜಿಲ್ಲಾ, ತಾಲೂಕು, ನಗರ ಬಿಜೆಪಿ ಘಟಕಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ರಾಮನಗರದ ಐಜೂರು ಸರ್ಕಲ್‌ನಲ್ಲಿ ಜಮಾವಣೆಗೊಂಡ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಕೈನಲ್ಲಿ ಭಿತ್ತಿಪತ್ರ ಹಿಡಿದು ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿದರು. ನಂತರ ನಮ್ಮ ಭೂಮಿ ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ವಕ್ಫ್ ಮಂಡಳಿಗೆ ಕುಮ್ಮಕ್ಕು ನೀಡುತ್ತಿದೆ. ಮಠ ಮಂದಿರ, ಸರ್ಕಾರಿ ಶಾಲೆಯ ಭೂಮಿಯ ಮೇಲೆ ವಕ್ಫ್ ಆಸ್ತಿ ನೋಂದಾಯಿಸಿ ರೈತರ ಬದುಕನ್ನು ಕತ್ತಲೆಗೆ ದೂಡುತ್ತಿದೆ. ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳ ಮೇಲೆ ಪ್ರಭಾವಭೀರಿ ಬಡ ರೈತರ ಜಮೀನನ್ನು ವಕ್ಫ್ ಆಸ್ತಿ ಎಂದು ನಮೂದಿಸುವ ಕೆಲಸ ಆಗುತ್ತಿದೆ. ಕೂಡಲೇ ಇದು ನಿಲ್ಲಬೇಕು. ಜತೆಗೆ ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಿ ಬಡ ಜನರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಕ್ಫ್ ರೈತರ ಆಸ್ತಿ ಕಬಳಿಕೆ, ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಸರ್ಕಾರ ಮತ ಬ್ಯಾಂಕ್‌ಗೋಸ್ಕರ ಈ ರೀತಿ ಬಡ ರೈತರ ಮೇಲೆ ಗದಾ ಪ್ರಹಾರ ನಡೆಸುತ್ತಿದೆ ಎಂದು ಆಕ್ರೋಶ ಹೊರ ಹಾಕಿ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು.

ಪ್ರತಿಭಟನೆ ನಂತರ ಐಜೂರು ಸರ್ಕಲ್‌ನಿಂದ ರಾಮನಗರದ ತಾಲೂಕು ಆಡಳಿತ ಸೌಧದವರೆಗೆ ಮೆರವಣಿಗೆ ಮುಖಾಂತರ ಸಾಗಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪವಿಭಾಗಾಧಿಕಾರಿ ಬಿನೋಯ್ ಅವರಿಗೆ ಮನವಿ ಸಲ್ಲಿಸಿದರು.

ರೇಷ್ಮೆ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಗೌತಮ್‌ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ತಾಲೂಕು ಅಧ್ಯಕ್ಷ ಪಿ.ಎಸ್. ಜಗದೀಶ್, ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಎಸ್.ಆರ್. ನಾಗರಾಜು, ಎಚ್.ಎಸ್. ಮುರಳೀಧರ್, ಮುಖಂಡರಾದ ಪ್ರಸಾದ್‌ಗೌಡ, ದೇವರಾಜು, ಪ್ರಕಾಶ್, ಚಂದ್ರಶೇಖರ್, ಕಾಳಯ್ಯ, ರುದ್ರದೇವರು, ದರ್ಶನ್‌ರೆಡ್ಡಿ, ಮಹದೇವಯ್ಯ, ನಾಗಮ್ಮ, ಶಿವಮಾದು, ರಾಘವೇಂದ್ರ, ಲಕ್ಷ್ಮೀ, ಸಂಜಯ್, ನಾಗೇಶ್, ಚಂದ್ರಶೇಖರ್‌ರೆಡ್ಡಿ, ಶಿವಾನಂದ್, ಭರತ್‌ರಾಜ್, ರಾಜು, ಚನ್ನಪ್ಪ, ಕೆಂಪರಾಜು, ರಮೇಶ್, ಚಂದ್ರಣ್ಣ, ದೇವಿಕಾ, ಚಂದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net