

ಮಾಗಡಿ : ಸಿದ್ದಗಂಗೆ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರು ಅಡಿಪಾಯ ಹಾಕಿದ ವೀರಾಪುರ ಗೊಲ್ಲಹಟ್ಟಿಯ ಹೊಸಕೆರೆ ಜಾಗವನ್ನು ಖಾಸಗಿ ವ್ಯಕ್ತಿ ಕಬಳಿಕೆಗೆ ಯತ್ನಿಸಿರುವುದರ ವಿರುದ್ಧ ಗೊಲ್ಲರಹಟ್ಟಿ ಗ್ರಾಮಸ್ಥರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಹಿರಿಯ ಮುಖಂಡ ಉಮೇಶ್ ಮಾತನಾಡಿ, ಗ್ರಾಮದ ಸುತ್ತಮುತ್ತ ಕೊಳವೆಬಾವಿ, ಕೆರೆ, ಕಟ್ಟೆಗಳು ಇಲ್ಲದಿದ್ದಾಗ ಗ್ರಾಮಸ್ಥರು ಹಸು, ಕುರಿ, ಮೇಕೆ, ಕಾಡುಪ್ರಾಣಿಗಳಿಗೆ ಕುಡಿಯಲು ನೀರಿಲ್ಲದೆ ಮಳೆಯೂ ಇಲ್ಲದೆ ತೊಂದರೆ ಉಂಟಾಗಿದೆ ಎಂದು ಸಿದ್ದಗಂಗೆ ಡಾ.ಶಿವಕುಮಾರಸ್ವಾಮಿಜಿ ಅವರ ಬಳಿ ಕೋರಿಕೊಂಡಿದ್ದರು. ಆಗ ಶ್ರೀಗಳು ಕರಿಯಪ್ಪಜ್ಜ ಎಂಬುವವರಿಗೆ ತಿಳಿಸಿ ಹೊಸಕೆರೆ ನಿರ್ಮಿಸಿದ್ದರು. ಈ ಕೆರೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಜಾನುವಾರುಗಳಿಗೆ ನೀರು ಕುಡಿಸುತ್ತಾರೆ. ಈ ಭಾಗದ ಪ್ರಾಣಿಗಳಿಗೆ ನೀರಿನ ಆಶ್ರಯವಾಗಿದೆ. ಹಾಗೂ ಕೆರೆಯ ಬಳಿ ಹಬ್ಬಗಳಲ್ಲಿ ಚಪ್ಪರ ಹಾಕಿ ದೇವರನ್ನು ಕೂರಿಸಿ ಪೂಜಿಸಲಾಗುತ್ತದೆ ಎಂದರು.
ಗುಡೇಮಾರನಹಳ್ಳಿ ಮೂಲದ ವ್ಯಕ್ತಿಯೊಬ್ಬರು ಹೊಸಕೆರೆ ಬಳಿ ಜಮೀನು ಖರೀದಿಸಿದ್ದಾರೆ. ಪಕ್ಕದಲ್ಲೆ ಇರುವ ಮುಕ್ಕಾಲು ಎಕರೆ ಕೆರೆಯ ಜಾಗವನ್ನು ಕಬಳಿಕೆಗೊಳಿಸಲು ಮುಂದಾಗಿ ಜೆಸಿಬಿಯಿಂದ ಮಟ್ಟ ಮಾಡಲು ಮುಂದಾದಾಗ ಗ್ರಾಮಸ್ಥರು ತಡೆದ ವೇಳೆ ದರ್ಪ, ದೌರ್ಜನ್ಯವೆಸಗಿ, ರೌಡಿಗಳನ್ನು ಬಿಟ್ಟು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗೊಲ್ಲರ ಹಟ್ಟಿ ಗ್ರಾಮಗಳ ಹಸು, ಕರುಗಳಿಗೆ ಕೆರೆ ಆಧಾರವಾಗಿದೆ. ಇಂತಹ ಕೆರೆಯನ್ನು ಒತ್ತುವರಿ ಮಾಡಲು ಮುಂದಾಗಿದ್ದಾರೆ. ಇವರೊಂದಿಗೆ ಬಾಣವಾಡಿ ಗ್ರಾಪಂ ಉಪಾಧ್ಯಕ್ಷ ಮುತ್ತುರಾಜು ಎಂಬುವವರು ಶಾಮೀಲಾಗಿ ಗ್ರಾಮಸ್ಥರನ್ನು ಬೆದರಿಸುತ್ತಿದ್ದಾರೆ. ಈ ಸಂಬಂಧ ಶನಿವಾರ ಗ್ರಾಮಸ್ಥರೆಲ್ಲರೂ ಸೇರಿ ಕೆರೆಯ ಜಾಗದಲ್ಲಿ 200 ಸಸಿಗಳನ್ನು ನೆಟ್ಟರೂ ಶನಿವಾರ ರಾತ್ರಿ ಸಸಿಗಳನ್ನು ಕಿತ್ತುಹಾಕಿದ್ದಾರೆ. ಹೋರಾಟ ನಡೆಸಿಯಾದರೂ ಜಾಗವನ್ನು ಒತ್ತುವರಿ ಮಾಡಿಕೊಡಲು ಬಿಡುವುದಿಲ್ಲ. ಮುಂದಿನ ತಲೆಮಾರಿಗೆ ಈ ಜಾಗವನ್ನು ಉಳಿಸುತ್ತೇವೆ. ಮತ್ತೆ ಈ ಜಾಗದಲ್ಲಿ ಸಸಿ ನೆಟ್ಟು ಪೋಷಿಸುತ್ತೇವೆ. ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು. ಅವರು ಸ್ಥಳಕ್ಕೆ ಭೇಟಿ ನೀಡಿ ಈ ಕೆರೆಯ ಜಾಗವನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ವೃದ್ದೆ ಗಂಗಮ್ಮ ಮಾತನಾಡಿ, ಸಿದ್ದಗಂಗಾ ಶ್ರೀಗಳು ಕೆರೆಕಟ್ಟಿಸಿ ಸಾವಿರಾರು ಮಂದಿಗೆ ಅನುಕೂಲ ಕಲ್ಪಿಸಿದರು. ನಮಗೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ನೋವನ್ನು ತೋಡಿಕೊಂಡರು.
ಸುವರ್ಣಮ್ಮ ಮಾತನಾಡಿ, ಕೆರೆಯ ಬಳಿ ಶಿವರಾತ್ರಿ ವೇಳೆ ಚಿತ್ರಲಿಂಗೇಶ್ವರ, ಕೆಂಪಯ್ಯ ಸ್ವಾಮಿಯನ್ನು ಕೂರಿಸಿ ಪೂಜೆ ಸಲ್ಲಿಸುತ್ತಿದ್ದೇವೆ. ಇಂತಹ ಪುಣ್ಯದ ಜಾಗವನ್ನು ಒತ್ತುವರಿ ಮಾಡಿಕೊಂಡರೆ ದೇವರ ಕೂರಿಸಲು, ಸಾಕು ಪ್ರಾಣಿಗಳನ್ನು ಮೇಯಿಸಲು ಜಾಗ ಇಲ್ಲದಂತಾಗುತ್ತದೆ. ಗ್ರಾಮಸ್ಥರು ಎಲ್ಲಿಗೆ ಹೋಗುವುದು ಎಂದು ಪ್ರಶ್ನಿಸಿದರು.
ಗ್ರಾಮಸ್ಥರಾದ ಲೋಕೇಶ್ ರಾಜಣ್ಣ, ಮಲ್ಲೇಶ್, ಸತೀಶ್, ಮಹೇಶ್, ರಮೇಶ್, ರಾಜಣ್ಣ, ಲೋಕೇಶ್, ಜವರಯ್ಯ, ಕೆಂಪರಾಜು, ಜಯಣ್ಣ, ಸುನೀಲ್ ಕುಮಾರ್, ಕಿರಣ್ ಕುಮಾರ್, ಬೈಲಮ್ಮ, ರತ್ನಮ್ಮ ಇತರರು ಇದ್ದರು.