

ಗುರುಪುರ: ನೀರುಮಾರ್ಗ ಗ್ರಾಪಂ ಕಚೇರಿ ಎದುರು ಶುಕ್ರವಾರ ಕೋರ್ಟ್ ಆದೇಶದ ಮೇರೆಗೆ ಮನೆ ಕಳೆದುಕೊಂಡ ಕುಟುಂಬದ ಯುವಕನೊಬ್ಬ, ತಮ್ಮ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಿದರು.
ನೀರುಮಾರ್ಗ ಗ್ರಾಪಂ ವ್ಯಾಪ್ತಿಯ ಕೆಎಂಎಫ್ ಡೈರಿಗೆ ಹತ್ತಿರದ ಪೆದಮಲೆ ಎಂಬಲ್ಲಿ 70 ವರ್ಷದಿಂದ ವಾಸ್ತವ್ಯ ಹೂಡಿದ್ದ ಕುಟುಂಬವೊಂದರ ಮೂವರು ಕೋರ್ಟ್ ಆದೇಶದನ್ವಯ ವಾಸದ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.
ವರ್ಷಗಳ ಹಿಂದೆ ತೆರೆಜಾ ಕ್ರಾಸ್ತಾ ಎಂಬುವರ ಕುಟುಂಬ ವಾಸಿಸುತ್ತಿದ್ದ ಮನೆ ಜಾಗದ ವಿಷಯದಲ್ಲಿ ಆ ಆಸ್ತಿಯ ಮೂಲ ವಾರಸುದಾರರು ಎನ್ನಲಾದವರು ಹೈಕೋರ್ಟ್‌ನಲ್ಲಿ ಸಿವಿಲ್ ದಾವೆ ಹೂಡಿದ್ದರು. ತೆರೆಜಾರ ಬಳಿಕ ಈ ಮನೆಯಲ್ಲಿ ಹೆನ್ರಿ, ಅವರ ಪತ್ನಿ ಸೆವೆರಿನ್ ಹಾಗೂ ಪುತ್ರ ಎರೋಲ್ ವಾಸಿಸುತ್ತಿದ್ದರು. ಮನೆ ಖಾಲಿ ಮಾಡುವಂತೆ ಸದ್ರಿ ಕುಟುಂಬಕ್ಕೆ ಶುಕ್ರವಾರ ಕೋರ್ಟ್ ಆದೇಶ ನೀಡಿತ್ತು.
ಇದೀಗ ಮನೆಗೆ ಬೀಗ ಹಾಕಲಾಗಿದ್ದು, ಬೀದಿಪಾಲಾದ ಹಿರಿಯ ನಾಗರಿಕರಾದ ತಂದೆ-ತಾಯಿ(ಹೆನ್ರಿ-ಸೆವೆರಿನ್) ಬೇರೆಡೆ ವಾಸಿಸುತ್ತಿದ್ದಾರೆ ಎಂದಿರುವ ಅವರ ಪುತ್ರ, ಮೆಕಾನಿಕಲ್ ಇಂಜಿನಿಯರ್ ಪದವೀಧರ ಎರೋಲ್ ಎಂಬುವರು ಶುಕ್ರವಾರ ಬೆಳಗ್ಗಿನಿಂದ ನೀರುಮಾರ್ಗ ಗ್ರಾಪಂ ಎದುರಿರುವ ರಸ್ತೆ ಬದಿಯಲ್ಲಿ ಧರಣಿ ಆರಂಭಿಸಿ, ‘ನನಗೆ ಮೂಲಭೂತ ಹಕ್ಕುಗಳು ಬೇಕು’ ಎಂದು ಆಗ್ರಹಿಸಿದರು.