

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ವೈಯಕ್ತಿಕ ಬದುಕಿನ ಕಷ್ಟಗಳನ್ನು ಸಹಿಸುತ್ತಾ, 50 ವರ್ಷಗಳಿಗೂ ಅಧಿಕ ಕಾಲ ಧರ್ಮ ನಿಷ್ಠೆ ಅನುಸರಿಸುತ್ತಿರುವ ಶ್ರೇಷ್ಠ ವ್ಯಕ್ತಿ ಡಾ.ಹೆಗ್ಗಡೆಯವರು. ಧಾರ್ಮಿಕ ನಾಯಕರು ಸಾತ್ವಿಕವಾಗಿದ್ದಾಗ, ಅವರಿಗೆ ಬೆಂಬಲ ನೀಡುವುದೇ ಭಾರತೀಯ ಧರ್ಮ ಪರಂಪರೆಯ ರಹಸ್ಯ ಎಂದು ಮೂಡುಬಿದಿರೆ ಜೈನಮಠದ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಮೇಲಿನ ಸುಳ್ಳು ಆರೋಪ ಖಂಡಿಸಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಶನಿವಾರ ಸಮಾನ ಮನಸ್ಕರ ಜನಾಗ್ರಹ ಸಮಾವೇಶದಲ್ಲಿ ಮಾತನಾಡಿದರು.
ವಾಗ್ಮಿ ಮುನಿರಾಜ ರೆಂಜಾಳ ದಿಕ್ಸೂಚಿ ಭಾಷಣ ಮಾಡಿ, ಶುದ್ಧತೆ, ಸ್ಥಿತ ಪ್ರಜ್ಞೆ, ಧರ್ಮನಿಷ್ಠೆಯಿಂದ ಅವರು ಯಾವುದೇ ಸೆಕ್ಯೂರಿಟಿ ಇಲ್ಲದೆ ಸಹಸ್ರಾರು ಜನರ ಮುಂದೆ ಓಡಾಡುತ್ತಾರೆ. ಸಮಾಜದ ಎಲ್ಲ ವರ್ಗದ ಜನರ ಕಣ್ಣೀರು ಒರೆಸುವ, ಅವರಿಗೆ ವಿವಿಧ ರೀತಿಯಲ್ಲಿ ನೆರವಾಗುವ ಮೂಲಕ ಖಾವಂದರು ನಿಜಾರ್ಥದಲ್ಲಿ ಮಾನವಧರ್ಮ ಪ್ರತಿಪಾದಕರಾಗಿದ್ದಾರೆ ಎಂದರು.
ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೌಟರ ಅರಮನೆಯ ಕುಲದೀಪ ಎಂ., ದ.ಕ. ಮಾಜಿ ಸಂಸದರು, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯ ಕೊರಗಪ್ಪ, ಬಿಜೆಪಿ ಮುಖಂಡರಾದ ಸುದರ್ಶನ್ ಎಂ., ಕೆ.ಪಿ.ಜಗದೀಶ್ ಅಧಿಕಾರಿ, ಕೃಷ್ಣರಾಜ ಹೆಗ್ಡೆ, ಕೆಎಂಎಫ್ ನಿರ್ದೇಶಕ ಕೆ.ಪಿ.ಸುಚರಿತ ಶೆಟ್ಟಿ, ಉದ್ಯಮಿ ಕೆ.ಶ್ರೀಪತಿ ಭಟ್, ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ, ಸುಧೇಶ್ ಕುಮಾರ್, ಆದರ್ಶ್ ಅರಮನೆ, ಪ್ರಮುಖರಾದ ಬಾಹುಬಲಿ ಪ್ರಸಾದ್, ಕೃಷ್ಣರಾಜ ಹೆಗ್ಡೆ, ಶ್ವೇತಾ ಜೈನ್, ಶಶಿಧರ್ ನಾಯಕ್, ಅಂಡಾರು ಗುಣಪಾಲ ಹೆಗ್ಡೆ, ಧನಕೀರ್ತಿ ಬಲಿಪ, ವಾಸುದೇವ ನಾಯಕ್, ಸಂಪತ್ ಸಾಮ್ರಾಜ್ಯ, ರಾಜವರ್ಮ ಬೈಲಂಗಡಿ, ಬೆಳುವಾಯಿ ಸೀತಾರಾಮ ಆಚಾರ್ಯ, ಧರಣೇಂದ್ರ ಕುಮಾರ್, ಅಮರ್‌ಕೋಟೆ, ಸುಭಾಶ್ಚಂದ್ರ ಚೌಟ ಮತ್ತಿತರರಿದ್ದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಹಿಂದು ಧರ್ಮದಲ್ಲಿದ್ದು, ದೇವರಿಲ್ಲ ಎನ್ನುವವರೇ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುತ್ತಿದ್ದಾರೆ. ಎಡಪಂಥೀಯರ ಜತೆ ಸೇರಿ, ನಮ್ಮ ಧರ್ಮ ಕ್ಷೇತ್ರಗಳಿಗೆ ಸವಾರಿ ಮಾಡಲು ನಾವು ಬಿಡುವುದಿಲ್ಲ. ಹಿಂದು ಸಮಾಜ ಹುನ್ನಾರಗಳ ವಿರುದ್ಧ ಜಾಗೃತರಾಗಬೇಕು. ಸಹೋದರಿ ಸೌಜನ್ಯಾಳಿಗೆ ನ್ಯಾಯ ಸಿಗಬೇಕೆನ್ನುವುದು ನಮ್ಮೆಲ್ಲರ ಆಶಯ. ಆದರೆ ಧಾರ್ಮಿಕ ಕೇಂದ್ರ, ಧಾರ್ಮಿಕ ಮುಖಂಡರನ್ನು ಅವಹೇಳ ಮಾಡುವುದನ್ನು ಸಹಿಸಲಾಗುವುದಿಲ್ಲ. ಉಮಾನಾಥ ಎ.ಕೋಟ್ಯಾನ್, ಶಾಸಕ ಖಾವಂದರು ತಮ್ಮ ಕೆಲಸದ ಮೂಲಕ ನೂರಾರು ಸಂದೇಶ ಸಮಾಜಕ್ಕೆ ಕೊಟ್ಟವರು. ತಮ್ಮ ಬದುಕನ್ನು ಸಮಾಜಕ್ಕೆ ಅರ್ಪಿಸಿದವರು. ತಮ್ಮ ಬದುಕಿನ 58 ವರ್ಷಗಳಲ್ಲಿ ದಾನ-ಧರ್ಮಗಳ ಮೂಲಕ ಶ್ರೇಷ್ಠತೆ ಪ್ರತಿಪಾದಿಸಿದವರು. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ದುಷ್ಟ ಜಾಲಕ್ಕೆ ಸರಿಯಾದ ಉತ್ತರ ನೀಡಬೇಕಾಗಿದೆ. 800 ವರ್ಷಗಳಿಂದ ಗೌರವಯುತವಾಗಿ ಬದುಕಿದ ಮನೆತನ ಹೀಯಾಳಿಸುವ ವ್ಯರ್ಥ ಪ್ರಯತ್ನ ಇಂದು ಸಾಮಾಜಿಕ ಜಾಲತಾಣಗಳ ಮೂಲಕ ದುಷ್ಟ ವ್ಯಕ್ತಿಗಳು ಮಾಡುತ್ತಿದ್ದಾರೆ. ಸರ್ಕಾರ ಇಂತಹ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಡಾ.ಎಂ ಮೋಹನ ಆಳ್ವ, ಅಧ್ಯಕ್ಷ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ