ಕೆಂಪುಕಲ್ಲು, ಮರಳಿಗೆ ಸೂಕ್ತ ನೀತಿ : ಪ್ರತಿಭಟನೆಯಲ್ಲಿ ಸಿಡಬ್ಲ್ಯೂಎಫ್‌ಐ ಒತ್ತಾಯ

New Project (50)
Published on

ಮೂಡುಬಿದಿರೆ: ಕೆಂಪುಕಲ್ಲು ಮತ್ತು ಮರಳು ಸಿಗುವಂತೆ ಕರಾವಳಿಗೆ ಸೂಕ್ತ ನೀತಿಯನ್ನು ಅಳವಡಿಸಬೇಕೆಂದು ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಡಬ್ಲ್ಯೂಎಫ್‌ಐ) ಮೂಡುಬಿದಿರೆ ತಾಲೂಕು ಸಮಿತಿ ಒತ್ತಾಯಿಸಿದೆ.

ಮೂಡುಬಿದಿರೆ ಆಡಳಿತ ಸೌಧದ ಎದುರು ಸೋಮವಾರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಡಬ್ಲುೃಎಫ್‌ಐ ಜಿಲ್ಲಾಧ್ಯಕ್ಷ ವಸಂತ ಆಚಾರಿ, ಕೆಂಪುಕಲ್ಲು, ಮರಳು ಸಂಬಂಧಿಸಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಿರುವುದರಿಂದ ಕೆಂಪುಕಲ್ಲು ಗಣಿಗಾರಿಕೆ ಮತ್ತು ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಇವುಗಳಿಗೆ ಸಂಬಂಧಪಟ್ಟ ಮಾಫಿಯಾ, ಅಕ್ರಮ ದಂಧೆಗಳನ್ನು ತಡೆಯುವ ಭರದಲ್ಲಿ ಬಡ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಜನಪ್ರತಿನಿಧಿಗಳು, ಅದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಫಿಯಾದಲ್ಲಿ ಶಾಮೀಲು ಆಗುವುದರಿಂದ ಇಲ್ಲಿಯವರೆಗೆ ಸೂಕ್ತ ನಿಯಮ ರೂಪಿಸಲು ಸಾಧ್ಯವಾಗಿಲ್ಲ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡು ತುರ್ತುಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಸುಮಾರು 1.26 ಲಕ್ಷ ಜನ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಅವರ ಜೀವನೋಪಾಯಕ್ಕೆ ಸರ್ಕಾರ ಕನಿಷ್ಠ 10 ಸಾವಿರ ರೂ. ಪರಿಹಾರಧನ ಒದಗಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ, ಸಿಡಬ್ಲುೃಎಫ್‌ಐ ತಾಲೂಕು ಕಾರ್ಯದರ್ಶಿ ಶಂಕರ್ ವಾಲ್ಪಾಡಿ, ಮುಖಂಡರಾದ ಕೃಷ್ಣಪ್ಪ ನಡಿಗುಡ್ಡೆ, ದಿವಾಕರ ಸುವರ್ಣ, ವಾಸುದೇವ ಆಚಾರಿ, ಗಿರಿಜಾ, ಲಕ್ಷ್ಮೀ ಮತ್ತಿತರರಿದ್ದರು. ಹಳೇ ಪೊಲೀಸ್ ಠಾಣೆಯಿಂದ ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net