ಆಳ್ವಾಸ್‌ನಲ್ಲಿ ಎನ್‌ಸಿಸಿ ಶಿಬಿರ ಸಂಪನ್ನ : ಥಲ್ ಸೇನಾ ಸ್ಪರ್ಧೆಗಾಗಿ ಕೆಡೆಟ್‌ಗಳಿಗೆ ಫೈರಿಂಗ್, ಬ್ಯಾಟಲ್ ಕ್ರಾಫ್ಟ್, ಡ್ರಿಲ್ ತರಬೇತಿ

New Project (48)
Published on

ಮೂಡುಬಿದಿರೆ: ಎನ್‌ಸಿಸಿ 21 ಕರ್ನಾಟಕ ಬೆಟಾಲಿಯನ್‌ನಿಂದ ಆಳ್ವಾಸ್‌ನ ವಿದ್ಯಾಗಿರಿ ಆವರಣದಲ್ಲಿ ಆಯೋಜಿಸಲಾಗಿದ್ದ 10 ದಿನಗಳ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಸಂಪನ್ನವಾಯಿತು. ಮಂಗಳೂರಿನ ಎನ್‌ಸಿಸಿ ಸಮೂಹದ ಮುಖ್ಯ ಕಚೇರಿಯ ವ್ಯಾಪ್ತಿಗೊಳಪಟ್ಟ ವಿವಿಧ ಬೆಟಾಲಿಯನ್‌ಗಳಿಂದ 598 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.

ಈ ಶಿಬಿರವು ಮೈಸೂರಿನಲ್ಲಿ ನಡೆಯಲಿರುವ ಥಲ್ ಸೇನಾ ಸ್ಪರ್ಧೆಗೆ ಎನ್‌ಸಿಸಿ ಕೆಡೆಟ್‌ಗಳನ್ನು ತರಬೇತುಗೊಳಿಸುವ ಉದ್ದೇಶ ಹೊಂದಿತ್ತು. ಸುಮಾರು 133 ಕೆಡೆಟ್‌ಗಳಿಗೆ ಫೈರಿಂಗ್, ಬ್ಯಾಟಲ್ ಕ್ರಾಫ್ಟ್, ಡ್ರಿಲ್, ನಕ್ಷೆ ಓದುವಿಕೆ, ರೈಫಲ್ ನಿರ್ವಹಣೆ, ಫೀಲ್ಡ್ ಕ್ರಾಫ್ಟ್, ಮತ್ತು ಮಿಲಿಟರಿ ವಿಷಯಗಳಲ್ಲಿ ತರಬೇತಿ ನೀಡಲಾಯಿತು. ಮಂಗಳೂರಿನ ಎನ್‌ಸಿಸಿ ಸಮೂಹದ ಮುಖ್ಯ ಕಚೇರಿಯಿಂದ ಒಟ್ಟು 83 ಕೆಡೆಟ್‌ಗಳು ಮೈಸೂರಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಮಂಗಳೂರಿನ ಎನ್‌ಸಿಸಿ ಸಮೂಹದ ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ ಮಾತನಾಡಿ, ಶಿಬಿರಗಳಲ್ಲಿ ಕಲಿಯುವ ಶಿಸ್ತು, ದೇಶಭಕ್ತಿ, ತಾಳ್ಮೆ ಮತ್ತು ಒಗ್ಗಟ್ಟು ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುತ್ತದೆ. ಶಿಸ್ತು ಮತ್ತು ಸ್ವಚ್ಛತೆ ಕೇವಲ ಶಿಬಿರದ ಪರಿಸರದಲ್ಲಷ್ಟೆ ಅಲ್ಲ, ದಿನನಿತ್ಯದ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.

ನಂತರ ಕೆಡೆಟ್‌ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಸ್ಪರ್ಧಾ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಮಾಂಡಿಂಗ್ ಆಫೀಸರ್ 21 ಕರ್ನಾಟಕ ಬೆಟಾಲಿಯನ್‌ನ ಕರ್ನಲ್ ರಾಹುಲ್ ಚೌಹಾಣ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಗುರೀಂದರ್ ಸಿಂಗ್, ಸುಬೇದಾರ್ ಮೇಜರ್ ಉನ್ನಿಕೃಷ್ಣನ್, ಎನ್‌ಸಿಸಿ ಅಧಿಕಾರಗಳು, ಮಾರ್ಗದರ್ಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net