

ಗುರುಪುರ: ಕುಪ್ಪೆಪದವು ಗ್ರಾಪಂ ಕಚೇರಿ ಎದುರು ಕುಪ್ಪೆಪದವಿನ ನಿವೇಶನರಹಿತರು 11 ದಿನಗಳಿಂದ ನಡೆಸುತ್ತಾ ಬಂದಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸೋಮವಾರ ಮುಕ್ತಾಯಗೊಂಡಿತು.
ಮಂಗಳೂರು ತಹಸೀಲ್ದಾರ್ ಪ್ರಶಾಂತ್ ಪಾಟೀಲ್ ಪ್ರತಿಭಟನಕಾರರೊಂದಿಗೆ ಮಾತನಾಡಿ, ಕಲ್ಲಾಡಿಯಲ್ಲಿರುವ ಸರ್ಕಾರಿ ಜಾಗದಲ್ಲಿ ಜುಲೈ 9ರೊಳಗೆ ಹಕ್ಕುಪತ್ರ ಪಡೆದಿರುವ ನಿವೇಶನರಹಿತರಿಗೆ ಜಾಗ ಹಂಚಲಾಗುವುದು. ಜತೆಗೆ ಆಗಸ್ಟ್ 15ರೊಳಗೆ ಅಂಬೆಲೊಟ್ಟುವಿನಲ್ಲಿ ಗುರುತಿಸಲಾದ 5.8 ಎಕ್ರೆ ಜಾಗ ಹಂಚಿಕೆಗಾಗಿ ಇಲಾಖಾಮಟ್ಟದ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ತಹಸೀಲ್ದಾರ್ ಭರವಸೆಯಂತೆ ಧರಣಿ ಸ್ಥಗಿತಗೊಳಿಸುವುದಾಗಿ ಹೇಳಿದ ನಿವೇಶನರಹಿತರು ಆಗಸ್ಟ್ 15ರಂದು ನಿವೇಶನ ಸಿಗದೆ ಹೋದಲ್ಲಿ ಪುನಃ ಧರಣಿ ಮುಂದುವರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಗುರುಪುರ ಹೋಬಳಿ ಕಂದಾಯ ನಿರೀಕ್ಷಕ ಪೂರ್ಣಚಂದ್ರ, ಕುಪ್ಪೆಪದವು ಪಂಚಾಯಿತಿ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಮೊಹಮ್ಮದ್ ಶರೀಫ್ ಕಜೆ, ಸದಸ್ಯರು, ಪಿಡಿಒ ಸವಿತಾ ಮಂದೋಳಿಕರ್, ಗ್ರಾಮಕರಣಿಕ ಮುತ್ತಪ್ಪ, ಕಾಂಗ್ರೆಸ್ ಮುಖಂಡರಾದ ಪೃಥ್ವಿರಾಜ್ ಆರ್.ಕೆ., ಗಿರೀಶ್ ಆಳ್, ಅಬ್ದುಲ್ ರಜಾಕ್, ಹರಿಯಪ್ಪ ಮುತ್ತೂರು, ನಿವೇಶನರಹಿತರ ಹೋರಾಟ ಸಮಿತಿ ಸಂಚಾಲಕಿ ವಸಂತಿ ಕುಪ್ಪೆಪದವು, ಕಾರ್ಮಿಕ ಮುಖಂಡ ಸದಾಶಿವದಾಸ್ ಮತ್ತಿತರರಿದ್ದರು.