

ರಾಮನಗರ : ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಗೆ ನಿಷೇಧ ಏರಿರುವ ಜಿಲ್ಲಾಧಿಕಾರಿಗಳ ಕ್ರಮದ ವಿರುದ್ಧ ಮತ್ತೊಮ್ಮೆ ರೈತ ಸಂಘ ಮತ್ತು ಇತರೆ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಟನೆಗೆ ನಿಷೇಧ ಹೇರಿದ್ದರ ವಿರುದ್ಧ ಈ ಹಿಂದೆ ಹೋರಾಟ ನಡೆಸಿದ್ದ ರೈತ ಸಂಘ ಮತ್ತು ಇತರೆ ಸಂಘಟನೆಗಳ ಕಾರ್ಯಕರ್ತರು ನಂತರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವರಿಗೆ ಮನವಿ ನೀಡುವ ಮೂಲಕ ನಿಷೇಧ ತೆರವಿಗೆ ಒತ್ತಾಯಿಸಿದ್ದರು. ಆದರೆ, ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸದ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ನಗರದ ಕಂದಾಯ ಭವನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕಾರ್ಯಕರ್ತರು ನಂತರ ಆರ್‌ಟಿಓ ಕಚೇರಿ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಜಿಲ್ಲಾಧಿಕಾರಿ ವಿರುದ್ಧ ಘೋಷಣೆಗಳು ಕೂಗಿ ನಂತರ ಜಿಲ್ಲಾಧಿಕಾರಿಗೆ ನುಗ್ಗಲು ಮುಂದಾದರು. ಅಷ್ಟರಲ್ಲಾಗಲೇ ಪೊಲೀಸ್ ಬಂದೋಬಸ್ತ್ ಮಾಡಿದ್ದರಿಂದ ಯಾರೂ ಒಳಗೆ ಹೋಗದಂತೆ ಆಯಿತು. ಈ ವೇಳೆ ರೈತ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆದು, ಅಂತಿಮವಾಗಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ಮುಂದುವರಿಸಿ, ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು.
ಕಪ್ಪು ಪಟ್ಟಿ ಪ್ರದರ್ಶನ : ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಜಿಲ್ಲಾಧಿಕಾರಿ ರೈತ ವಿರೋಧಿ ಮಾತ್ರವಲ್ಲ, ಸಂವಿಧಾನ ವಿರೋಧಿ ಆಗಿದ್ಧಾರೆ. ಪ್ರತಿಭಟಿಸುವ ಹಕ್ಕನ್ನು ಕಸಿದುಕೊಳ್ಳುವ ಯತ್ನವನ್ನು ಮಾಡಿದ್ದಾರೆ. ಸಂವಿಧಾನದ ನಿಜವಾದ ಮಾಲೀಕರು ನಾವು ನಮ್ಮನ್ನು ನಿರ್ಬಂಧ ಮಾಡಲು ಬಂದಿದ್ದಾರೆ. ನಮ್ಮ ಜತೆ ಕೂತು ನಮ್ಮ ಸಮಸ್ಯೆ ಆಲಿಸಿದ್ದರೆ ಇವು ನಿಜವಾದ ಜಿಲ್ಲಾಧಿಕಾರಿಯಾಗುತ್ತಿದ್ದರು ಎಂದು ಟೀಕಿಸಿದರು. ನಿಷೇಧಾಜ್ಞೆ ಹಿಂದಕ್ಕೆ ಪಡೆಯದಿದ್ದರೆ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲಾಗುವುದು. ಹಾಗೂ ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಸಿದರು.
ಹಿರಿಯ ಮುಖಂಡ ಚಾಮರಸ ವಾಲೀ ಪಾಟೀಲ್ ಮಾತನಾಡಿ, ಯಾವ ಕಾರಣಕ್ಕೆ ಪ್ರತಿಭಟನೆ ಮಾಡಲು ಅವಕಾಶ ನೀಡುತ್ತಿಲ್ಲ ಎನ್ನುವುದನ್ನು ಮನದಟ್ಟು ಮಾಡುವ ಕೆಲಸವನ್ನು ಮಾಡದೇ ಏಕಾಏಕಿ ನಿಷೇಧ ಹೇರಿರುವುದು ಸಂವಿಧಾನ ಬಾಹಿರ ಕ್ರಮ. ನೊಂದವರು ಬಂದು ಪ್ರತಿಭಟನೆ ಮಾಡುತ್ತಾರೆ. ಅವರ ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಿಲ್ಲ ಎನ್ನುವ ತಮ್ಮ ಅಸಮರ್ಪಕತೆಯನ್ನು ನಿಷೇಧಾಜ್ಞೆ ಮೂಲಕ ನೀವೆ ತೋರಿಸಿಕೊಂಡಿದ್ದೀರಿ ಎಂದು ಕಿಡಿಕಾರಿದರು.
ಮಂಡ್ಯ, ಮೈಸೂರು, ಚಾಮರಾಜನಗರದ ಹಲವಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮುಖಂಡರಾದ ಕುಮಾರಸ್ವಾಮಿ, ಮುನಿರಾಜು, ತಿಮ್ಮೇಗೌಡ, ಹೊನ್ನಾಯನಹಳ್ಳಿ ಕೃಷ್ಣಪ್ಪ, ಪ್ರವೀಣ್ ಹೊಸದುರ್ಗ ಮುಂತಾದವರು ಇದ್ದರು.
ಸಂಧಾನ ವಿಫಲ ಪ್ರತಿಭಟನಾಕಾರರು ಮತ್ತು ಜಿಲ್ಲಾಡಳಿತ ನಡುವೆ ಮಾತುಕತೆಗೆ ವೇದಿಕೆ ನಿರ್ಮಿಸಲು ಪೊಲೀಸರು ಮುಂದಾದರು. ಸ್ಥಳಕ್ಕೆ ಆಗಮಿಸಿದ ಎಎಸ್‌ಪಿಗಳಾದ ರಾಮಚಂದ್ರಯ್ಯ ಮತ್ತು ಸುರೇಶ್ ಕೆಲ ರೈತ ಮುಖಂಡರನ್ನು ಜಿಲ್ಲಾಧಿಕಾರಿಯೊಂದಿಗೆ ಮಾತುಕತೆಗೆ ಆಹ್ವಾನಿಸಿದರು. ಈ ವೇಳೆ ಬಡಗಲಪುರ ನಾಗೇಂದ್ರ, ಕೆ.ಮಲ್ಲಯ್ಯ, ಕುಮಾರಸ್ವಾಮಿ ಸೇರಿ ಇತರೆ ಕೆಲ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮಾತುಕತೆ ನಡೆಸಿದರು. ಲಭ್ಯ ಮಾಹಿತಿ ಪ್ರಕಾರ ಮುಖಂಡರು ತಕ್ಷಣವೇ ನಿಷೇಧಾಜ್ಞೆ ಹಿಂಪಡೆಯಲು ಒತ್ತಾಯಿಸಿದರೆ, ಜಿಲ್ಲಾಧಿಕಾರಿ ಒಂದು ವಾರದ ಕಾಲಾವಕಾಶ ಕೋರಿದ್ದಾರೆ. ಯಾರೂ ತಮ್ಮ ನಿಲುವಿನಿಂದ ಹೊರ ಬಾರದ ಹಿನ್ನೆಲೆಯಲ್ಲಿ ಸಭೆ ವಿಫಲವಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಸರ್ಕಾರಿ ಅಧಿಕಾರಿಗಳು ಯಾವುದೇ ಅಡೆತಡೆ ಇಲ್ಲದೆ ಕರ್ತವ್ಯ ನಿರ್ವಹಿಸುವುದಕ್ಕಾಗಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನಿಷೇಧಾಜ್ಞೆ ವಿಧಿಸಲಾಗಿದೆ. ಪ್ರತಿಭಟನೆಗೆ ಅನತಿ ದೂರದಲ್ಲಿ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ಅಲ್ಲಿ ಯಾರು ಬೇಕಾದರೂ ಪ್ರತಿಭಟನೆ ನಡೆಸಿ, ಪ್ರಮುಖರ ನಿಯೋಗದೊಂದಿಗೆ ಕಚೇರಿಗೆ ಬಂದು ಸಂಬಂಧಪಟ್ಟ ಅಧಿಕಾರಿಗೆ ಮನವಿ ಕೊಡಬಹುದು. ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುವ ಎಲ್ಲರಿಗೂ ಜಿಲ್ಲಾಧಿಕಾರಿ ಕಚೇರಿ ಮುಕ್ತವಾಗಿದೆ. ಕಚೇರಿ ಅವಧಿಯಲ್ಲಿ ಯಾವಾಗ ಬೇಕಾದರೂ ಬಂದು, ನನ್ನನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಪಡೆಯಬಹುದು. ಯಶವಂತ್ ವಿ. ಗುರುಕರ್, ಜಿಲ್ಲಾಧಿಕಾರಿ, ರಾಮನಗರ