ಮುಖ್ಯಮಂತ್ರಿಯಿಂದ ಭ್ರಷ್ಟರ ರಕ್ಷಣೆ: ಜೋಮೋನ್ ಜೋಸ್ ಆರೋಪ

Ksd_Protest
Published on

ಕಾಸರಗೋಡು: ಗಂಭೀರ ಆರೋಪ ಎದುರಿಸುತ್ತಿರುವ ರಾಜ್ಯ ಎಡಿಜಿಪಿ ಎ.ಆರ್.ಅಜಿತ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿದಲ್ಲಿ ತನ್ನ ರಹಸ್ಯ ಬಹಿರಂಗಗೊಳ್ಳುವ ಭೀತಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕಾಡುತ್ತಿರುವುದಾಗಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜೋಮೋನ್ ಜೋಸ್ ತಿಳಿಸಿದ್ದಾರೆ.

ಪೊಲೀಸ್ ದೌರ್ಜನ್ಯದ ಸಮಗ್ರ ತನಿಖೆ ಹಾಗೂ ಆಡಳಿತ ಪಕ್ಷದ ಶಾಸಕರ ಬಹಿರಂಗ ಹೇಳಿಕೆ ಆಧರಿಸಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿಯನ್ನು ರಾಜಕೀಯ ಕಾರ್ಯದರ್ಶಿ ಹಾಗೂ ಡಿಜಿಪಿಯನ್ನು ಎಡಿಜಿಪಿ ನಿಯಂತ್ರಿಸುತ್ತಿರುವುದು ಕೇರಳಕ್ಕೇ ನಾಚಿಕೆಗೇಡಿನ ಸಂಗತಿಯಾಗಿದ್ದು, ಮುಖ್ಯಮಂತ್ರಿ ರಾಜೀನಾಮೆ ನೀಡುವವರೆಗೂ ಯುವ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದರು.

ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಆರ್.ಕಾರ್ತಿಕೇಯನ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಉಪಾಧ್ಯಕ್ಷ ಬಿ.ಪಿ.ಪ್ರದೀಪ್ ಕುಮಾರ್ ಆಶಯ ಭಾಷಣ ಮಾಡಿದರು. ಜಿಲ್ಲಾ ಉಪಾಧ್ಯಕ್ಷೆ ಶೋನಿ ಕೆ.ಥಾಮಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ಕಪ್ಪಿತ್ತಾನ್, ಸಚಿನ್ ಕೆ.ಮ್ಯಾಥ್ಯೂ, ಮಾರ್ಟಿನ್ ಜಾರ್ಜ್, ದೀಪು ಕಲ್ಯೋಟ್, ಅನೂಪ್ ಕಲ್ಯೋಟ್, ಗಿರಿಕೃಷ್ಣನ್ ಕೂಡಲ, ರಫಿ ಅಡೂರು, ರತೀಶ್ ಕಟ್ಟುಮಡಂ, ರಜಿತಾ ರಾಜನ್, ಆರೀಫ್ ಮಚ್ಚಂಪಾಡಿ, ಅರ್ಜುನನ್ ತಾಯಲಂಗಾಡಿ ಉಪಸ್ಥಿತರಿದ್ದರು.

ಧರಣಿಗೆ ಮೊದಲು ಪ್ರತಿಭಟನಾ ಮೆರವಣಿಗೆ ನಡೆಯಿತು. ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಜುನೈದ್ ಉರುಮಿ, ವಸಂತನ್ ಐ.ಎಸ್., ಶಿಬಿನ್ ಉಪ್ಪಿಳಿಕಾಯಿ ಹಾಗೂ ಕ್ಷೇತ್ರದ ಅಧ್ಯಕ್ಷರು ಮೆರವಣಿಗೆಗೆ ನೇತೃತ್ವ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net