

ಉಪ್ಪಿನಂಗಡಿ : ವಿದ್ಯುನ್ಮಾನ ವ್ಯವಸ್ಥೆಗಳನ್ನು ಬಳಸಿ ನಾಗರಿಕರಿಗೆ ಸುಲಲಿತ ಸೇವೆ ಒದಗಿಸುವ ಕಡೆಗೆ ಸರ್ಕಾರ ಗಮನ ಹರಿಸಬೇಕು. ಗ್ರಾಮಸ್ಥರು ತಮ್ಮ ವಿನ್ಯಾಸ ನಕ್ಷೆಗಾಗಿ ಊರೆಲ್ಲಾ ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸಬೇಕು. ಗ್ರಾಮದಲ್ಲಿ ಆಗದಿದ್ದರೆ, ತಾಲೂಕು ಕಚೇರಿಯಲ್ಲಾದರೂ ಪುಡಾ ಕಚೇರಿಯನ್ನು ತೆರೆದು ವಿನ್ಯಾಸ ನಕ್ಷೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಪಂಚಾಯಿತಿ ಸದಸ್ಯರು ಪೆರ್ನೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.
ಗ್ರಾಪಂ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ವಿಜಯ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ಜನತೆಯ ಸಂಕಷ್ಟ ಪ್ರಸ್ತಾಪಿಸಿದ ಸದಸ್ಯ ಸುನಿಲ್ ನೆಲ್ಸನ್ ಪಿಂಟೋ ಗ್ರಾಮದ ನಾಗರಿಕರು ತಾಲೂಕು ಕಚೇರಿಯಲ್ಲಿ ಪುಡಾ ಕಚೇರಿ ತೆರೆಯುವಂತೆ ಅಗ್ರಹಿಸಿದ್ದರೂ ಸ್ಪಂದನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾ.ಪಂ ವ್ಯಾಪ್ತಿಯ ವ್ಯಾಪಾರ ಪರವಾನಗಿ ಹಾಗೂ ಇತರ ಕೆಲಸಗಳಿಗೂ ಆದಾಯ ಇಲಾಖೆಯ ಪಾನ್‌ಕಾರ್ಡ್ ದಾಖಲೆ ಒದಗಿಸ ಬೇಕಾದ ಆದೇಶ ಬಂದಿರುತ್ತದೆ ಎಂದು ಪಿಡಿಒ ಸಭೆಯ ಗಮನಕ್ಕೆ ತಂದಾಗ, ಕೆರಳಿದ ಸದಸ್ಯರು ಗ್ರಾಮೀಣ ಭಾಗದ ಸಣ್ಣ ವ್ಯಾಪಾರಿಗಳನ್ನು ಸತಾಯಿಸಬೇಡಿ, ಜನರಿಗೆ ದಾಖಲಾತಿಗಳ ಹೊರೆ ಹೊರಿಸಬೇಡಿ ಎಂದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಪ್ರಾಧಿಕಾರಕ್ಕೆ ಗ್ರಾಮೀಣ ಭಾಗದ ಜನವಸತಿ ಪ್ರದೇಶದ ಸಂಪರ್ಕ ರಸ್ತೆಗಳನ್ನು ಗುರುತಿಸಿ ಪಟ್ಟಿ ತಯಾರಿಸಿ ಕಳುಹಿಸಿ ಕೊಡುವಂತೆ ತಿಳಿಸಿದ್ದಲ್ಲದೆ ಹೆದ್ದಾರಿ ಅಗಲೀಕರಣದ ಬಳಿಕ ಸಂಪರ್ಕ ರಸ್ತೆಯಲ್ಲಿ ಆ ಭಾಗದ ವಾಹನ ಚಾಲನೆಗೆ ಹತೋಟಿ ತರುವಲ್ಲಿ ಇಲಾಖೆ ಮನವರಿಕೆ ಮಾಡಬೇಕು . ಗ್ರಾಮದ ಘನ ತ್ಯಾಜ್ಯ ಘಟಕ ಹಾಗೂ ತ್ಯಾಜ್ಯಸಂಗ್ರಹಣೆಯ ಶುಲ್ಕ ವಿಧಿಸುವಲ್ಲಿ ಸದಸ್ಯರು ಸಹಕಾರ ನೀಡಬೇಕು, ಕುಡಿಯುವ ನೀರು ಸರಬರಾಜ ನಿರ್ವಾಹಕರ ಪ್ರತ್ಯೇಕ ಸಭೆ ನಡೆಸಿ ಉತ್ತಮ ಸೇವೆ ನೀಡುವ ಬಗ್ಗೆ ತೀರ್ಮಾನ, ಮರಳಿ ಬಾ ಶಾಲೆಗೆ ಅಭಿಮಾನದಡಿ ಪ್ರತಿ ವಾರ್ಡ್‌ನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಮಾಹಿತಿ ಸಂಗ್ರಹಿಸಿ ಎಂಬೆಲ್ಲ ವಿಚಾರಗಳು ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟವು.
ಉಪಾಧ್ಯಕ್ಷೆ ಭಾರತಿ, ಸದಸ್ಯ ಕೇಶವ ಸುಣ್ಣಾಣ, ಪ್ರಕಾಶ ನಾಯಕ್, ಶಾರದಾ, ಮಹಮ್ಮದ್ ಫಾರುಕ್, ರೇವತಿ, ಸುಮತಿ, ಜಯಂತಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ವಸೂಲಿಯಾಗದ ಬಾಕಿ ಉಳಿದಿದ್ದ ತೆರಿಗೆಯನ್ನು ವಸೂಲಿ ಮಾಡಿ ಪಂಚಾಯಿತಿ ಆದಾಯ ಹೆಚ್ಚಿಸಿದ ಪೆರ್ನೆ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಕಾರ್ಯದರ್ಶಿಯನ್ನು ಪಂಚಾಯಿತಿ ಸದಸ್ಯ ನವೀನ್ ಪದೆಬರಿ ಸನ್ಮಾನಿಸಿ ಗೌರವಿಸಿದರು.
ಗ್ರಾಮದಲ್ಲಿ ಕಾರ್ಯಚರಿಸುವ ಮೂರು ಕಂಪನಿಗಳ ಟವರುಗಳ ವಾರ್ಷಿಕ ತೆರಿಗೆ ವಸೂಲಿ ಮಾಡುವಂತೆ ಪಂಚಾಯಿತಿ ಆಡಳಿತ ನಿರ್ಣಯದ ಮೇಲೆ ನಿರ್ಣಯ ಕೈಗೊಂಡಿದ್ದರೂ ವಸೂಲಿ ಸಾಧ್ಯವಾಗಿರಲಿಲ್ಲ. ಆದರೆ ಪಿಡಿಒ ಆಗಿ ಅಧಿಕಾರ ಸ್ವೀಕರಿಸಿದ ಸುನೀಲ್ ಕುಮಾರ್ ಪ್ರಾಮಾಣಿಕವಾಗಿ ಪ್ರಯತ್ನಿಸಿ ಬಾಕಿಯಾಗಿದ್ದ ತೆರಿಗೆಯನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಕಾರ್ಯದಕ್ಷತೆಗೆ ಗೌರವ ಸಲ್ಲಿಸುವ ಸಲುವಾಗಿ ಅವರನ್ನು ಗೌರವಿಸಲಾಗುತ್ತಿದೆ ಎಂದು ನವೀನ್ ಪದೆಬರಿ ತಿಳಿಸಿದರು.