ಒತ್ತುವರಿಯಿಂದ ಕೆರೆಗಳ ರಕ್ಷಣೆ

20-12-rama-lake survay
Published on
  • ಜಿಲ್ಲೆಯ 1067 ಕೆರೆಗಳ ಸರ್ವೇ ಕಾರ್ಯ ಪೂರ್ಣ
  • ಭೂ ದಾಖಲೆಗಳ ಇಲಾಖೆಯಿಂದ ಕಾರ್ಯಾಚರಣೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲೆಯಲ್ಲಿರುವ ಕೆರೆಗಳ ಒತ್ತುವರಿ ತೆರವು ವಿಚಾರ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಒತ್ತುವರಿಯಾಗ ಕೆರೆ ಅಂಗಳವನ್ನು ತೆರವುಗೊಳಿಸುವ ಮೂಲಕ ಅವುಗಳ ರಕ್ಷಣೆ ಕಾರ್ಯ ನಡೆಯುತ್ತಿದೆ.
ಯಾವುದೇ ಗ್ರಾಮದ ನೀರಿನ ಸೆಲೆ ಅಲ್ಲಿನ ಕೆರೆ ಕಟ್ಟೆಗಳೇ ಆಗಿರುತ್ತವೆ, ಇತ್ತೀಚಿನ ವರ್ಷಗಳಲ್ಲಿ ಇವುಗಳ ಒತ್ತುವರಿ ಹೆಚ್ಚಾದ ಕಾರಣ ಇವುಗಳ ತೆರವು ಕಾರ್ಯದ ಆಗ್ರಹ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದಲೂ ಕೆರೆಗಳ ಒತ್ತುವರಿ ತೆರವಿಗೆ ಪ್ರಯತ್ನ ನಡೆಯುತ್ತಿದ್ದು, ಇದರ ಪರಿಣಾಮ ಇರುವ ಕೆರೆಗಳ ಸರ್ವೇ ಕಾರ್ಯ ಮಾಡುವ ಮೂಲಕ ಒತ್ತುವರಿ ಗುರ್ತಿಸುವಿಕೆ ನಡೆಯುತ್ತಿದ್ದು, ಈವರೆವಿಗೂ ಜಿಲ್ಲೆಯಲ್ಲಿ ಒಟ್ಟು 1067 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಂಡಿದೆ.

ಸಾವಿರಕ್ಕೂ ಹೆಚ್ಚು ಕೆರೆ: ಜಿಲ್ಲೆಯಲ್ಲಿ ಒಟ್ಟು 1496 ಕೆರೆಗಳು ಇವೆ. ಇವುಗಳಲ್ಲಿ ಸಣ್ಣ ನೀರಾವರಿ ಇಲಾಕೆಗೆ ಸೇರಿದ 110, ಜಿಪಂಗೆ ಸೇರಿದ 1322, ಸ್ಥಳೀಯ ಸಂಸ್ಥೆಗಳಿಗೆ ಸೇರಿದ 61 ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ 3 ಕೆರೆಗಳು ಇವೆ. ಇವುಗಳಲ್ಲಿ ಬಹುತೇಕ ಎಲ್ಲಾ ಕೆರೆಗಳು ಒತ್ತುವರಿಯಾಗಿದ್ದು, ಇವುಗಳನ್ನು ತೆರೆವುಗೊಳಿಸುವ ಸಾಹಸಕ್ಕೆ ಸಂಬಂಧಪಟ್ಟ ಇಲಾಖೆಗಳು ಕೈ ಹಾಕಿರಲೇ ಇಲ್ಲ. ಆದರೆ, ಕಳೆದ ಬಿಜೆಪಿ ಸರ್ಕಾರದಲ್ಲಿ ಕೆರೆಗಳ ಒತ್ತುವರಿ ತೆರವು ಆಗಲೇಬೇಕು ಎನ್ನುವ ಕಟ್ಟು ನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಸರ್ವೇ ನಡೆಸಲು ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭೂ ದಾಖಲೆಗಳ ಇಲಾಖೆ ಸಿಬ್ಬಂದಿ ತ್ವರತಿ ಗತಿಯಲ್ಲಿ ಸರ್ವೇ ಕಾರ್ಯ ನಡೆಸಿದ್ದು, ಇಲ್ಲಿಯವರೆಗೆ ಒಟ್ಟಾರೆ 1067 ಕೆರೆಗಳ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ತೆರವು ಪ್ರಗತಿಯಲ್ಲಿ

ಒಂದೆಡೆ ಭೂ ದಾಖಲೆಗಳ ಇಲಾಖೆ, ಸರ್ವೇ ಕಾರ್ಯವನ್ನು ತನ್ನ ಕೆಲಸದ ಒತ್ತಡದ ನಡುವೆಯೇ ಮಾಡುತ್ತಿದೆ. ಸರ್ವೇ ಪೂರ್ಣಗೊಂಡ ಕೆರೆಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಿದೆ. ಇದನ್ನು ತಾಲೂಕು ಆಡಳಿತಕ್ಕೆ ನೀಡಿರುವ ಜಿಲ್ಲಾಢಳಿತ ಕೆರೆಗಳ ಒತ್ತುವರಿಯನ್ನು ನಡೆಸುತ್ತಿದೆ. ಆದರೆ, ಎಷ್ಟು ಕೆರೆಗಳ ಒತ್ತುವರಿಯನ್ನು ತೆರವು ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಜಿಲ್ಲಾಡಳಿತ ತಿಳಿಸುತ್ತಿಲ್ಲ.

ಸದ್ಯಕ್ಕೆ ಮೊದಲ ಹಂತದಲ್ಲಿ ಒತ್ತುವರಿ ಆಗಿರುವ ಸುಮಾರು 437 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿದೆ. ಮೊದಲಿಗೆ ಒತ್ತುವರಿದಾರಿಗೆ ನೋಟಿಸ್ ನೀಡಿ, ನಂತರ ತೆರವು ಕಾರ್ಯ ನಡೆಯುತ್ತಿದೆ.

ಈ ಹಿಂದೆಯೇ ಕೆರೆ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸರ್ಕಾರದ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಈಗ ಇದೇ ಅಸ್ತ್ರವನ್ನು ಬಳಕೆ ಮಾಡುವ ಸಾಧ್ಯತೆ ಇದ್ದು, ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಈಗಾಗಲೆ ನೋಟಿಸ್ ನೀಡುವ ಕೆಲಸವೂ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.

* ಜಿಲ್ಲೆಯಲ್ಲಿರುವ ಒಟ್ಟು ಕೆರೆಗಳು - 1496
* ಸರ್ವೇ ಪೂರ್ಣಗೊಂಡಿರುವುದು - 1067
* ಒತ್ತುವರಿ ಪ್ರಮಾಣ - 518.07 ಎಕರೆ
* ಒತ್ತುವರಿ ಮುಕ್ತ ಕೆರೆಗಳು - 505 ಹಾಗೂ 10700 ಎಕರೆ

ಈಗಾಗಲೆ ಜಿಲ್ಲೆಯಲ್ಲಿ ಒಟ್ಟು 1067 ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇವುಗಳಲ್ಲಿ 532 ಕೆರೆಗಳಲ್ಲಿ ಒಟ್ಟು 518 ಎಕರೆ ಒತ್ತುವರಿ ಬಾಕಿ ಇದ್ದು, ಇವುಗಳ ತೆರವು ಕಾರ್ಯ ನಡೆಯುತ್ತಿದೆ. ಒತ್ತುವರಿ ತೆರವಿಗೂ ಮುನ್ನ ನೋಟಿಸ್ ನೀಡಲಾಗುವುದು.
ಬಿ.ಆರ್.ಹನುಮೇಗೌಡ, ಉಪನಿರ್ದೇಶಕರು, ಭೂ ದಾಖಲೆಗಳ ಇಲಾಖೆ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net