ಸರ್ಕಾರಿ ಜಾಗ ರಕ್ಷಣೆ ಆದ್ಯ ಕರ್ತವ್ಯ

ಬಾಗೇಪಲ್ಲಿಯ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿದರು. ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ, ಉಪವಿಭಾಗೀಯ ಅಧಿಕಾರಿ ಅಶ್ವಿನ್, ತಹಸೀಲ್ದಾರ್ ಪ್ರಶಾಂತ್ ಕೆ.ಪಾಟೀಲ ಇದ್ದರು.
BPL 25 DC MEETING NEWS PHOTO
ಬಾಗೇಪಲ್ಲಿಯ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿದರು. ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ, ಉಪವಿಭಾಗೀಯ ಅಧಿಕಾರಿ ಅಶ್ವಿನ್, ತಹಸೀಲ್ದಾರ್ ಪ್ರಶಾಂತ್ ಕೆ.ಪಾಟೀಲ ಇದ್ದರು.
Published on

ಒತ್ತುವರಿ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಿ - ಜನಸ್ಪಂದನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಜನರ ಕೆಲಸ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದರು.
ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನವನಗಳ ಜಾಗ ಅಥವಾ ಸರ್ಕಾರಿ ಸ್ಥಳಗಳನ್ನು ರಕ್ಷಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಸರ್ಕಾರಿ ಆಸ್ತಿ ಕಬಳಿಸಿರುವ, ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ವಿದ್ಯಾರ್ಥಿ ನಿಲಯ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಮಕ್ಕಳಿಗೆ ಕುಡಿಯಲು ಶುದ್ಧೀಕರಿಸಿದ ನೀರನ್ನೇ ಬಳಸುವಂತೆ ಸೂಚಿಸಿದರು.
ನಗರ, ಪಟ್ಟಣ, ಹಳ್ಳಿಗಳು ಸ್ವಚ್ಛವಾಗಿರಬೇಕಾದರೇ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಡುವ ಕೆಟ್ಟ ಗುಣವನ್ನು ಬಿಡಬೇಕು. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವ ಮನಸ್ಥಿತಿಯಿಂದ ಹೊರಬಂದು ಪರಿವರ್ತನೆಗೊಂಡಾಗ ಮಾತ್ರ ಸ್ವಚ್ಛ ಭಾರತದ ಕನಸು ನನಸಾಗಲಿದೆ. ನಿಷೇಧಿತ ಪ್ಲಾಸ್ಟಿಕ್ ಮಾರಾಟ ಹಾಗೂ ಸ್ವಚ್ಛತೆ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳು ಮತ್ತು ತಾಪಂ ಇಒ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ, ಉಪವಿಭಾಗೀಯ ಅಧಿಕಾರಿ ಅಶ್ವಿನ್, ತಹಸೀಲ್ದಾರ್ ಪ್ರಶಾಂತ್ ಕೆ.ಪಾಟೀಲ, ತಾಪಂ ಇಒ ರಮೇಶ್ ರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಪೊಲೀಸ್ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ, ವಲಯ ಅರಣ್ಯಾಧಿಕಾರಿ ಚಂದ್ರಶೇಖರ್, ಲೋಕೋಪಯೋಗಿ ಎಇಇ ಪ್ರದೀಪ್, ಸಹಾಯಕ ಕೃಷಿ ಅಧಿಕಾರಿ ಲಕ್ಷ್ಮೀ, ತಾಲೂಕು ವೈದ್ಯಾಧಿಕಾರಿ ಡಾ. ಸಿ.ಎನ್.ಸತ್ಯನಾರಾಯಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ತನುಜಾ ಮತ್ತಿತರರು ಇದ್ದರು.

ಶಾಲೆಗಳ ಬಳಿ ಟೀ ಸ್ಟಾಲ್‌ಗೆ ಪರವಾನಗಿ ಬೇಡ
ಪಟ್ಟಣದ ಶಾಲಾ, ಕಾಲೇಜುಗಳ ಸಮೀಪದಲ್ಲಿ ಯಾವುದೇ ಕಾರಣಕ್ಕೂ ಟೀ ಸ್ಟಾಲ್‌ಗಳಿಗೆ ಪುರಸಭೆಯಿಂದ ಪರವಾನಗಿ ನೀಡಬೇಡಿ. ಮುಖ್ಯರಸ್ತೆಯ ಎರಡು ಬದಿಯಲ್ಲಿ ಪುಟ್‌ಪಾತ್ ಒತ್ತುವರಿ ಮಾಡಿಕೊಂಡು ಅಂಗಡಿ ತೆರೆದಿರುವವರ ವಿರುದ್ದ ಪೊಲೀಸ್ ಮತ್ತು ಪುರಸಭೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಪಡಿತರ ವಿತರಣೆಯಲ್ಲಿ ನಿರ್ಲಕ್ಷ್ಯ ಸಲ್ಲದು
ಸರ್ಕಾರಿ ನ್ಯಾಯಬೆಲೆ ಅಂಗಡಿಗಳನ್ನು ನಿಗದಿತ ಸಮಯದವರೆಗೂ ತೆರೆಯುತ್ತಿಲ್ಲ ಎಂಬ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಪಡಿತರ ಧಾನ್ಯಗಳ ವಿತರಣೆಯಲ್ಲಿ ನಿರ್ಲಕ್ಷ್ಯ ಸಲ್ಲದು, ಕಡ್ಡಾಯವಾಗಿ ಸರ್ಕಾರಿ ಆದೇಶದಂತೆ ಪಡಿತರ ಚೀಟಿದಾರರಿಗೆ ಪ್ರತಿನಿತ್ಯ ಪಡಿತರ ವಿತರಣೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಆಹಾರ ನಿರೀಕ್ಷಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ದೇವಿಕುಂಟೆ ಗ್ರಾಮಸ್ಥರ ಅಳಲು
ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ದೇವಿಕುಂಟೆ ಗ್ರಾಮದ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡುವಂತೆ ಎರಡು ದಶಕಗಳಿಂದ ಸಂಬಂದಪಟ್ಟ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಆಟೋ, ಬಸ್, ಆಂಬುಲೆನ್ಸ್‌ಗಳು ಗ್ರಾಮಕ್ಕೆ ಬರುವುದಿಲ್ಲ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ರಸ್ತೆ ದುರಸ್ತಿ ಕಾಮಗಾರಿಗೆ ಸಂಬಂಧಿಸಿದ ಕ್ರಿಯಾಯೋಜನೆ ಸಲ್ಲಿಸುವಂತೆ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಎಇಇಗೆ ಸೂಚಿಸಿದರು.

67 ಅರ್ಜಿ ಸ್ವೀಕಾರ
ಜನಸ್ಪಂದನಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸೇರಿದ 30, ಪುರಸಭೆ ವ್ಯಾಪ್ತಿಯ 18, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ 10, ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ 5, ಮುಜರಾಯಿ, ಕರ್ನಾಟಕ ಗೃಹ ಮಂಡಳಿ, ಲೋಕೋಪಯೋಗಿ, ಲೀಡ್ ಬ್ಯಾಂಕ್‌ಗೆ ಸಂಬಂಧಪಟ್ಟಂತೆ ತಲಾ ಒಂದು ಅರ್ಜಿ ಸೇರಿ ಒಟ್ಟು 67 ಅರ್ಜಿಗಳು ಸ್ವೀಕೃತವಾದವು.


ವಿಶೇಷ ಪ್ರಕರಣ ಇತ್ಯರ್ಥ

ವಿಲೇವಾರಿಯಾದ ಅರ್ಜಿಗಳ ಪೈಕಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಪ್ರಕರಣವು ವಿಶೇಷತೆ ಪಡೆದಿತ್ತು. ಧಾರವಾಡ ಐಐಟಿಗೆ ಪ್ರವೇಶದ ಅರ್ಹತೆ ಪಡೆದಿದ್ದ ಬಾಗೇಪಲ್ಲಿ ತಾಲೂಕಿನ ಜಿ. ವಂಶಿಕಾ ಎಂಬ ವಿದ್ಯಾರ್ಥಿನಿಯ ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಸಂಬಂಧಿಸಿದ್ದ ಹಿಂದಿನ ಅರ್ಜಿ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಅಸಿಂಧುವಾಗಿತ್ತು. ಇದರಿಂದ ಆಕೆ ಹೊಸದಾಗಿ ಸಲ್ಲಿಸಿದ ಅರ್ಜಿಯ ವಿಲೇವಾರಿಗೆ ತೊಡಕಾಗಿತ್ತು. ಇದನ್ನರಿತ ಅಧಿಕಾರಿಗಳು ಅಸಿಂಧುವಾದ ಅರ್ಜಿಯನ್ನು ರದ್ದುಗೊಳಿಸಿ, ನೂತನ ಅರ್ಜಿಯನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಮಂಜೂರು ಮಾಡಿದರು. ಇದರಿಂದ ವಿದ್ಯಾರ್ಥಿನಿಗೆ ಶೈಕ್ಷಣಿಕ ಸಮಸ್ಯೆ ದೂರವಾಗಿದ್ದು ಅರ್ಜಿದಾರರ ಮುಖದಲ್ಲಿ ಮಂದಹಾಸ ಮೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net