ಮಾನವೀಯತೆಯಿಂದ ಮಕ್ಕಳ ಕೇಸ್‌ಗಳ ಬಗೆಹರಿಯಲಿ: ಹೈಕೋರ್ಟ್ ಮುಖ್ಯ ನ್ಯಾ. ಪ್ರಸನ್ನ ಬಿ.ವರಾಳೆ ಸಲಹೆ

prasanna b varale
Published on

ಬೆಂಗಳೂರು: ಕಾನೂನು ಸಂಘರ್ಷಕ್ಕೆ ಕೆಲ ಮಕ್ಕಳು ಸಿಲುಕಿದ್ದರೂ ಕಾಳಜಿ, ಮಾನವೀಯತೆ ಮತ್ತು ಪರಿಹಾರತ್ಮಕ ದೃಷ್ಟಿಯಿಂದ ನಾವೆಲ್ಲರೂ ಇವುಗಳನ್ನು ಬಗೆಹರಿಸುವ ಅಗತ್ಯವಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಸಲಹೆ ನೀಡಿದರು.

ಬಾಲ ನ್ಯಾಯ ಮಂಡಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗೃಹ ಇಲಾಖೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಹಯೋಗದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಭಾನುವಾರ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ‘ಮಕ್ಕಳ ರಕ್ಷಣೆ ಕುರಿತು ರಾಜ್ಯ ಮಧ್ಯಸ್ಥಗಾರರ ಸಮಾಲೋಚನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಕಾನೂನು ಬಾಹಿರ ಚಟುವಟಿಕೆಗಳಿಗೆ ಸಿಲುಕದಂತೆ ಮುನ್ನೆಚ್ಚರಿಕೆ ವಹಿಸುವುದು ನಮ್ಮೆಲ್ಲರ ಆದ ಕರ್ತವ್ಯ. ಪ್ರತಿ ಮಗು ಉತ್ತಮ ವಾತಾವರಣದಲ್ಲಿ ಬೆಳೆಯಲು, ತೊಂದರೆಗಳಿಗೆ ಸಿಲುಕದೆ ವಿಕಾಸಗೊಳ್ಳಲು ಅವಕಾಶ ನೀಡುವುದು ಎಲ್ಲರ ಜವಾಬ್ದಾರಿ. ಮಕ್ಕಳ ಪುನಶ್ಚೇತನ ಕ್ರಮಗಳನ್ನು ಉತ್ತರದಾಯಿತ್ವ ಇಟ್ಟುಕೊಂಡು ರೂಪಿಸಬೇಕು ಎಂದು ಸಲಹೆ ನೀಡಿದರು. ಸಾಂಪ್ರಾದಾಯಿಕ ಕ್ರಿಮಿನಲ್ ನ್ಯಾಯದಾನ ಪ್ರಕ್ರಿಯೆಯಿಂದ ಸಮುದಾಯ ಆಧಾರಿತ ಕ್ರಮಗಳ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬಹುದು. ಪುನಶ್ಚೇತನ, ಕೌಶಲ, ಅಭಿವೃದ್ಧಿ, ಶಿಕ್ಷಣ, ಆಪ್ತ ಸಲಹೆ ಮತ್ತು ಧನಾತ್ಮಕ ಬದಲಾವಣೆಯನ್ನು ತರಲು ನಾವು ಶ್ರಮಿಸಬೇಕು.ಮಕ್ಕಳನ್ನು ಬಂಧನದಲ್ಲಿ ಇಡುವುದರಿಂದ ಅವರನ್ನು ಮತ್ತಷ್ಟು ತಪ್ಪು ದಾರಿಗೆಳೆಯುವ ಆತಂಕವಿದೆ. ಹೀಗಾಗಿ, ಸಮುದಾಯ ಆಧಾರಿತ ಪರ್ಯಾಯಗಳ ಮೂಲಕ ಮಕ್ಕಳ ಹಕ್ಕನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಬೇಕು ಎಂದು ನ್ಯಾ. ಪ್ರಸನ್ನ ವರಾಳೆ ಕರೆ ನೀಡಿದರು.

ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್, ಕಾನೂನು ಸೇವಾ ಸಮಿತಿ ಅಧ್ಯಕ್ಷ ನ್ಯಾ. ಸೋಮಶೇಖರ್, ಬಾಲ ನ್ಯಾಯ ಸಮಿತಿ ಅಧ್ಯಕ್ಷ ನ್ಯಾ. ಕೆ.ಎಸ್. ಮುದ್ಗಲ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಮತ್ತಿತರರಿದ್ದರು.

2,366 ಪ್ರಕರಣಗಳು ಬಾಕಿ: ರಾಜ್ಯದಲ್ಲಿ 34 ಬಾಲ ನ್ಯಾಯ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಕಾನೂನಿನ ಜೊತೆ ಸಂಘರ್ಷಕ್ಕೀಡಾದ 2,366 ಪ್ರಕರಣಗಳುವಿಚಾರಣೆ ಹಂತದಲ್ಲಿದೆ. ಕಾನೂನಿನ ಜೊತೆ ಸಂಘರ್ಷದ ಪ್ರಕರಣಗಳಲ್ಲಿ ಪೊಲೀಸಿಂಗ್ ತುಸು ವೈಫಲ್ಯ ಕಂಡಿದೆ. ಮಕ್ಕಳ ಮಾದಕ ವಸ್ತುಗಳ ಬಳಕೆ ತಡೆಯಲು ಸಾಧ್ಯವಾಗಿಲ್ಲ. ಬೀದಿ ಬದಿಯಲ್ಲಿರುವ ಮಕ್ಕಳು, ಮುರಿದು ಬಿದ್ದ ಕುಟುಂಬಗಳ ಮಕ್ಕಳು, ಆರ್ಥಿಕ ಅಗತ್ಯದ ತುರ್ತು ಅನಿವಾರ್ಯತೆ ಇರುವ ಮಕ್ಕಳನ್ನು ಮಾದಕ ವ್ಯಸನಕ್ಕೆ ಬಳಸುವ ಮತ್ತು ಗಂಭೀರ ಅಪರಾಧ ಪ್ರಕರಣಗಳಲ್ಲಿ ತೊಡಗಿಸುವ ಘಟನೆಗಳನ್ನು ತಡೆಯಬೇಕು ಎಂದು ನ್ಯಾಯಮೂರ್ತಿ ಜಿ. ನರೇಂದರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net