

ಹೊಸಪೇಟೆ: ನೀರು ನಾಯಿಗಳು ಶುದ್ಧ ನದಿಗಳ ರಾಯಭಾರಿಗಳು. ಅವುಗಳನ್ನು ಸಂರಕ್ಷಣೆ ಮಾಡುವುದರಿಂದ ಜಲಚರಗಳ ರಕ್ಷಿಸಲು ಸಾಧ್ಯ ಎಂದು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಅಭಿಪ್ರಾಯಪಟ್ಟರು.
ದರೋಜಿ ಕರಡಿಧಾಮದಿಂದ ತಾಲೂಕಿನ ನರಸಾಪುರದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ನೀರು ನಾಯಿಗಳ ದಿನಾಚರಣೆಯಲ್ಲಿ ಮಾತನಾಡಿದರು. ತುಂಗಭದ್ರಾ ಜಲಾಶಯದಿಂದ ಕಂಪ್ಲಿ ಸೇತುವೆವರೆಗೆ ನಾನು ಸುದೀರ್ಘ ಸಂಶೋಧನೆ ಮಾಡಿ, ಇಲ್ಲಿನ ವನ್ಯಜೀವಿಗಳ ಸಂರಕ್ಷಣೆಗಾಗಿ ಸಂಶೋಧನಾ ವರದಿ ಹಾಗೂ ಪ್ರಸ್ತಾವನೆಯನ್ನು ಅರಣ್ಯ ಇಲಾಖೆಗೆ ಸಲ್ಲಿಸಿದ್ದೇನೆ. ಅದರನ್ವಯ 35 ಕಿಮೀ ಉದ್ದದ ನದಿಯನ್ನು ಸರ್ಕಾರ ‘ತುಂಗಭದ್ರಾ ನೀರುನಾಯಿ ಸಂರಕ್ಷಿತ ಮೀಸಲು’ ಎಂದು 2015ರಲ್ಲಿ ಘೋಷಿಸಿದೆ. ಇದರಿಂದ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ, ವನ್ಯಜೀವಿಗಳ ಕಳ್ಳಬೇಟೆಗೆ ಕಡಿವಾಣ ಬಿದ್ದಿದೆ ಎಂದರು.
ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯಸ್ವಾಮಿ ಮಳೀಮಠ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿರುವ ಅಪರೂಪದ ವನ್ಯಜೀವಿಗಳ ಸಂರಕ್ಷಣೆ ಎಲ್ಲರ ಕರ್ತವ್ಯ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು. ಉರಗತಜ್ಞ ವೇಣುಗೋಪಾಲ ನಾಯ್ಡು ಮಾತನಾಡಿ, ಕಳೆದ ಮೂರು ದಶಕಗಳಿಂದ ಹೊಸಪೇಟೆ ಸುತ್ತಲಿನಲ್ಲಿ ಸಾವಿರಾರು ಹಾವುಗಳನ್ನು ಸಂರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಭಾಸ್ಕರ ಮಾತನಾಡಿ, ಹೊಸಪೇಟೆ ತಾಲೂಕಿನಲ್ಲಿರುವ ವನ್ಯಜೀವಿಗಳ ವೈವಿಧ್ಯತೆ, ಅಪರೂಪದ ಅರಣ್ಯ, ವನ್ಯಜೀವಿ ಸಂಪತ್ತು ರಕ್ಷಣೆಯಲ್ಲಿ ಯುವಕರು ಮತ್ತು ಗ್ರಾಮಸ್ಥರ ಸಹಕಾರ ಅಗತ್ಯ ಎಂದರು.ಕಾರ್ಯಕ್ರಮಕ್ಕೂ ಮುನ್ನ ಹೊಸೂರು ಹುಲಿಗೆಮ್ಮ ದೇವಿ ಪಾದಗಟ್ಟೆ ಬಳಿ ಹಮ್ಮಿಕೊಂಡಿದ್ದ ನದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದರೋಜಿ ಕರಡಿ ಧಾಮದ ವಲಯ ಅರಣ್ಯಧಿಕಾರಿ ಉಷಾ ಎಂ., ಹೊಸೂರು ಗ್ರಾಪಂ ಅಧ್ಯಕ್ಷೆ ದುರುಗಮ್ಮ, ಉಪಾಧ್ಯಕ್ಷ ಜಗದೀಶ, ಹಂಪಿ ಗ್ರಾಪಂ ಅಧ್ಯಕ್ಷ ಹೇಮಗಿರಿ, ಉಪಾಧ್ಯಕ್ಷೆ ಪದ್ದಮ್ಮ, ಗುದ್ಲಿ ಪರಶುರಾಮ, ನರಸಾಪುರ ಸಹಿಪ್ರಾ ಶಾಲೆಯ ಮುಖ್ಯಶಿಕ್ಷಕಿ ಮಮ್ತಾಜ್ ಬೇಗಂ ಉಪಸ್ಥಿತರಿದ್ದರು.