More

    ಜಿಲ್ಲೆಯಲ್ಲಿ ನಿಲ್ಲದ ಆನೆ ಉಪಟಳ ಹೆಚ್ಚಿದ ರೈತರ ಆತಂಕ ಅರಣ್ಯ ಇಲಾಖೆಗೆ ದೊಡ್ಡ ಸವಾಲು

    ಗಂಗಾಧರ್ ಬೈರಾಪಟ್ಟಣ ರಾಮನಗರ

    ಜಿಲ್ಲೆಯಲ್ಲಿ ಆನೆ ಉಪಟಳ ನಿಂತಿಲ್ಲ. ಕಳೆದ ಕೆಲವು ದಿನಗಳಿಂದ ದಾಳಿ ತೀವ್ರತೆ ಕಡಿಮೆ ಆಗಿತ್ತು ಎನ್ನುವ ಹೊತ್ತಿಗೆ ಸೋಮವಾರ ಮಧ್ಯರಾತ್ರಿ ರೈತನೊಬ್ಬ ಆನೆ ದಾಳಿಗೆ ಬಲಿಯಾಗಿದ್ದು, ರೈತರಲ್ಲಿ ಆತಂಕ ಮೂಡುವಂತೆ ಮಾಡಿದೆ.
    ರಾಮನಗರ ಜಿಲ್ಲೆಯ ನಾಲ್ಕು ತಾಲೂಕಗಳು ಅರಣ್ಯ ಪ್ರದೇಶದಿಂದ ಸುತ್ತುವರಿದಿದ್ದು, ಆನೆ ದಾಳಿ ನಿರಂತರ ಎನ್ನುವಂತೆ ಆಗಿದೆ. ವಿವಿಧ ಕಡೆ ಸೋಲಾರ್ ಪವರ್ ಪೆನ್ಸಿಂಗ್ ಮತ್ತು ಆನೆ ಸೆರೆ ಕಾರ್ಯಾಚರಣೆ ನಂತರ ದಾಳಿಗಳು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೆ ರೈತನ ಸಾವು ಅರಣ್ಯ ಇಲಾಖೆಗೆ ದೊಡ್ಡ ಸವಾಲು ಒಡ್ಡಿದೆ.

    ಇನ್ನೂ 8 ಆನೆಗಳು ಇವೆ
    ರಾಮನಗರ – ಚನ್ನಪಟ್ಟಣ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಹಂದಿಗುಂದಿ, ತೆಂಗಿನಕಲ್ಲು, ನರಿಕಲ್ಲು ಗುಡ್ಡ ಮುಂತಾದ ಪ್ರದೇಶ ವ್ಯಾಪ್ತಿಯಲ್ಲಿ ಈಗಲೂ 7-8 ಆನೆಗಳಿವೆ. ಇವು ಈಗಲೂ ಆಹಾರ ಅರಸುತ್ತಾ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಲೇ ಇವೆ. ಈ ಪೈಕಿ ಒಂಟಿ ಆನೆಯೊಂದಿದ್ದು, ಇದೇ ಆನೆ ಕಾಳಯ್ಯ ಅವರನ್ನು ಸಾಯಿಸಿರಬಹುದು ಎಂದು ಅಂದಾಜಿಸಲಾಗಿದೆ. ಈಗಲೂ ತೆಂಗಿನಕಲ್ಲು, ಹಂದಿಗುಂದಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಈ ಆನೆಗಳು ರೈತರ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ನಾಶಪಡಿಸುತ್ತಿವೆ. ಹಾಗಾಗಿ ಎಚ್ಚರಿಕೆ ವಹಿಸಬೇಕಿದೆ.

    ಕ್ರಮ ಕೈಗೊಳ್ಳಲಿ
    ಅರಣ್ಯ ಇಲಾಖೆ ಈಗಾಗಲೇ ಕಬ್ಬಾಳು ಅರಣ್ಯ ಪ್ರದೇಶ ವ್ಯಾಪ್ತಿಯ ಕಂಚನಹಳ್ಳಿ ಸಮೀಪ ಸೋಲಾರ್ ಬೇಲಿ ನಿರ್ಮಾಣ ಮಾಡಿದೆ. ಇದರಿಂದ ಕಾವೇರಿ ವನ್ಯಜೀವಿ ಧಾಮದಿಂದ ಬರುವ ಆನೆಗಳ ನಿಯಂತ್ರಣವಾಗಿದೆ. ಅದೇ ರೀತಿ ಚನ್ನಪಟ್ಟಣದ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೂ ಸೋಲಾರ್ ಬೇಲಿ ನಿರ್ಮಾಣ ಮಾಡಲಾಗಿದೆ. ಇದು ಕೂಡ ಆನೆ ದಾಳಿ ನಿಯಂತ್ರಿಸಿದೆ. ಇದರ ಹೊರತಾಗಿಯೂ ಹೆಚ್ಚು ಆನೆ ದಾಳಿಗೆ ತುತ್ತಾಗುತ್ತಿರುವ ಹಂದಿಗುಂದಿ, ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೂ ಸೋಲಾರ್ ಬೇಲಿ ಹಾಕಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

    ಸಾತನೂರು ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ಹೊಸ ಕಬ್ಬಾಳು ಬಳಿ ಸೋಮವಾರ ರಾತ್ರಿ ಮಾವಿನ ತೋಟ ಕಾಯಲು ಹೋಗಿದ್ದ ಕಾಳಯ್ಯ (60) ಆನೆ ದಾಳಿಗೆ ಬಲಿಯಾಗಿದ್ದಾರೆ. ಆದರೆ ಯಾವ ಸಮಯದಲ್ಲಿ ದಾಳಿ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ. ವೃತ್ತಿಯಲ್ಲಿ ಮಾವಿನ ತೋಟ ನಿರ್ವಹಣೆ ಮಾಡುವ ಕೆಲಸ ಮಾಡುತ್ತಿದ್ದ ಕಾಳಯ್ಯ ಅವರ ಜಮೀನು, ಕಬ್ಬಾಳು ಅರಣ್ಯ ಪ್ರದೇಶಕ್ಕೆ ಹಾಕಲಾಗಿರುವ ಸೋಲಾರ್ ಬೇಲಿಯಿಂದ ಅಲ್ಪ ದೂರದಲ್ಲಿಯೇ ಇದ್ದು, ಇಲ್ಲಿ ದಾಳಿ ನಡೆದಿರುವುದು ಆತಂಕ ಹೆಚ್ಚುವಂತಾಗಿದೆ.

    ರೈತರು ಜಾಗೃತರಾಗಿರಿ
    ಆನೆ ಸೇರಿ ಬಹುತೇಕ ಕಾಡು ಪ್ರಾಣಿಗಳ ಕಾರ್ಯಾಚರಣೆ ರಾತ್ರಿ ವೇಳೆಯಲ್ಲಿಯೇ ನಡೆಯುತ್ತದೆ. ಆಹಾರ ಅರಸುತ್ತಾ ಕಾಡು ಪ್ರಾಣಿಗಳು ಮಾನವ ಸಂಚಾರ ಇಲ್ಲದ ಸಮಯವನ್ನೇ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಜಮೀನುಗಳಿಗೆ ಹೋಗುವ ರೈತರು ಎಚ್ಚರಿಕೆ ವಹಿಸುವುದು ಅಗತ್ಯ. ಅದರಲ್ಲೂ ಕಾಡಂಚಿನ ಗ್ರಾಮದ ರೈತರು ಮೈಯಲ್ಲಾ ಕಣ್ಣಾಗಿಸಿಕೊಳ್ಳಬೇಕಿದೆ. ಪ್ರಮುಖವಾಗಿ ಸೂರ್ಯಾಸ್ತದ ನಂತರ ಜಮೀನಿಗೆ ಹೋಗುವುದನ್ನು ನಿಲ್ಲಿಸಿದರೇ ಸೂಕ್ತ.

    ಮೃತಪಟ್ಟವರು

    ಕಳೆದ ಆಗಸ್ಟ್‌ನಲ್ಲಿ ಚನ್ನಪಟ್ಟಣ ತಾಲೂಕಿನ ಚನ್ನಿಗನಹೊಸಳ್ಳಿ ಗ್ರಾಮದ ಚನ್ನಮ್ಮ ಎಂಬುವರು ಆನೆ ದಾಳಿಗೆ ಬಲಿಯಾಗಿದ್ದರು. ಕನ್ನಿದೊಡ್ಡಿ ಬಳಿ ಮಹಿಳೆಯೊಬ್ಬರು ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರು. ಮಾಗಡಿಯ ಅಗಲಕೋಟೆ ಬಳಿ ಆನೆ ದಾಳಿಗೆ ರೈತ ಮೃತಪಟ್ಟಿದ್ದರು. ಇದಕ್ಕೂ ಮುನ್ನ ಚನ್ನಪಟ್ಟಣದ ದೊಡ್ಡನಹಳ್ಳಿ ಸಮೀಪ ಆನೆ ದಾಳಿಗೆ ರೈತರೊಬ್ಬರು ಬಲಿಯಾಗಿದ್ದರು. ಕಳೆದ ನವೆಂಬರ್‌ನಲ್ಲಿ ಕನಕಪುರದ ಬಿಳಿಕಲ್ಲು ಅರಣ್ಯ ಪ್ರದೇಶ ಸುಂಡಘಟ್ಟ ಬಳಿ ಆನೆ ದಾಳಿಗೆ ವಾಚರ್ ಒಬ್ಬರು ಮೃತಪಟ್ಟಿದ್ದರು. ಸೋಮವಾರ ರಾತ್ರಿ ಕಾಳಯ್ಯ ಮೃತಪಟ್ಟಿದ್ದಾರೆ. ಉಳಿದಂತೆ ಹಸುಗಳ ಸಾವು, ಬೆಳೆ ನಾಶ ನಿರಂತರವಾಗಿದೆ.

    ಆನೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ನಮ್ಮ ಪ್ರಯತ್ನದ ಹೊರತಾಗಿಯೂ ರೈತರು ಮತ್ತು ಸಾರ್ವಜನಿಕರು ಸೂರ್ಯಾಸ್ತ ಮತ್ತು ಸೂರ್ಯೋದಕ್ಕೂ ನಡುವಿನ ಅವಧಿಯಲ್ಲಿ ಜಮೀನುಗಳಿಗೆ ಹೋಗುವ ವೇಳೆ ಹೆಚ್ಚು ಜಾಗೃತೆಯಿಂದ ಇರಬೇಕು. ಮತ್ತಷ್ಟು ಸೋಲಾರ್ ವಿದ್ಯುತ್ ಬೇಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
    ದೇವರಾಜು, ಡಿಸಿಎ್, ರಾಮನಗರ ಪ್ರಾದೇಶಿಕ ಅರಣ್ಯ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts