ಹಿಂದು ಕಾರ್ಯಕರ್ತರಿಗೆ ರಕ್ಷಣೆ ನೀಡಿ

FotoJet (4)
Published on

ಶ್ರೀರಾಮ ಸೇನೆಯಿಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯಗೆ ಮನವಿ

ರಾಮನಗರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಹಿಂದು ಕಾರ್ಯಕರ್ತರನ್ನು ರೌಡಿಶೀಟರ್‌ಗಳನ್ನಾಗಿ ಮಾಡುತ್ತಿದ್ದು, ಕೂಡಲೇ ಈ ಪ್ರವೃತ್ತಿ ಕೈಬಿಡಬೇಕೆಂದು ಒತ್ತಾಯಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ನಂತರ ರಾಜ್ಯದಲ್ಲಿ ಅನೇಕ ಹಿಂದು ಕಾರ್ಯಕರ್ತರನ್ನು ಗುರಿಯಾಗಿಸಿ ಸುಖಾ ಸುಮ್ಮನೆ ಕೇಸ್‌ಗಳನ್ನು ಹಾಕಿ ರೌಡಿ ಶೀಟರ್ ತೆರೆದು ಗಡಿಪಾರು ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಕಗ್ಗಲೀಪುರ ಶ್ರೀ ರಾಮ ಸೇನಾ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಕೊಲೆ ಸಂಚು ರೂಪಿಸುತ್ತಿರುವ ಕಗ್ಗಲೀಪುರ ಗ್ರಾಮ ಪಂಚಾಯಿತಿ ಸದಸ್ಯನನ್ನು ಏಕೆ ಗಡಿಪಾರು ಮಾಡಿಲ್ಲ ಅಥವಾ ರೌಡಿಶೀಟರ್ ಮಾಡಿಲ್ಲ ಎಂದು ಪ್ರಶ್ನಿಸಿದರು.

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಸಿ.ಎಂ.ನಾಗಾರ್ಜುನ ಗೌಡ ಮಾತನಾಡಿ, ಗ್ರಾಪಂಸದಸ್ಯನ ಮೇಲೆ ಹಲವು ಪ್ರಕರಣಗಳಿದ್ದು, ಜೈಲಿಗೆ ಹೋಗಿ ಬಂದಿದ್ದಾನೆ. ಶ್ರೀರಾಮ ಸೇನೆ ಕಗ್ಗಲೀಪುರ ಘಟಕದ ಅಧ್ಯಕ್ಷರಿಗೆ ಕೊಲೆ ಬೆದರಿಕೆ ಹಾಕಿದ್ದು, ಈ ವಿಚಾರವಾಗಿ ಸಾಕ್ಷಿ ಸಮೇತ ದೂರು ನೀಡಿದ್ದರೂ, ಸ್ಥಳೀಯ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ತನಿಖೆಗೆ ಒಳಪಡಿಸಿದರೆ ಭೂ ಕಬಳಿಕೆ ಮಾಡಿರುವುದು ಬಯಲಾಗುತ್ತದೆ ಎಂದು ಆತನಿಗೆ ರಕ್ಷಣೆ ನೀಡಲಾಗುತ್ತಿದೆ ಎಂದರು.

ಶ್ರೀರಾಮ ಸೇನೆ ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂದರೇಶ್ ನರಗಲ್, ಪದಾಧಿಕಾರಿಗಳಾದ ಉಮೇಶ್ ಎನ್, ರಾಜೇಶ್, ನವೀನ್, ಸುನೀಲ್, ಮಂಜು, ಕೋಟಾಪ್ರಸನ್ನ, ಮೋಹನ್, ಗೀರಿಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net