

ರಾಮನಗರ : ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ದರ ಏರಿಕೆ ಖಂಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಗುರುವಾರ ಸೌದೆ ಒಲೆ ಉರಿಸಿ, ಹಂಡೆಯಲ್ಲಿ ನೀರು ಕಾಯಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಾಲು, ವಿದ್ಯುತ್, ಡೀಸೆಲ್, ಸಿಲಿಂಡರ್ ಸೇರಿ ಅಗತ್ಯ ವಸ್ತುಗಳ ದರ ಏರಿಕೆ ಮಾಡಿ, ಇದೀಗ ಬೆಲೆ ಏರಿಕೆ ವಿರುದ್ಧ ಬಿಜೆಪಿ-ಕಾಂಗ್ರೆಸ್ ಪರಸ್ಪರ ಹೋರಾಟ ಮಾಡುತ್ತಿವೆ. ಭ್ರಷ್ಟಾಚಾರಿಗಳ ವಿರುದ್ಧ ಭ್ರಷ್ಟಾಚಾರಿಗಳೇ ಹೋರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಲೇ ಬೆಲೆ ಏರಿಕೆಯನ್ನು ಇಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಐಜೂರು ಜಗದೀಶ್, ಜಿಲ್ಲಾಧ್ಯಕ್ಷ ಜೈಕುಮಾರ್ ತಾಲೂಕು ಅಧ್ಯಕ್ಷ ವಿ.ಎನ್.ಗಂಗಾಧರ್, ಯುವ ಘಟಕ ಅಧ್ಯಕ್ಷ ಆರ್.ಜೆ ಅರ್ಜುನ್, ಮುಖಂಡರಾದ ಕೆ.ಜಯರಾಮ, ಕೆಂಪರಾಜು, ಮಹಿಳಾ ಘಟಕ ಅಧ್ಯಕ್ಷೆ ಭಾಗ್ಯಸುಧಾ, ಬಿಡದಿ ಅಧ್ಯಕ್ಷ ಮಂಜುನಾಥ್ ಇದ್ದರು.
ಹೋರಾಟ ಕಾಪಿ ಮಾಡಬಾರದು! : ಬಿಜೆಪಿಯವರು ಎತ್ತಿನಗಾಡಿ ಮೆರವಣಿಗೆ ಮೂಲಕ ಚಳವಳಿಗೆ ಇಳಿದಿದ್ದಾರೆ. ಯಡಿಯೂರಪ್ಪ ಅವರ ಕಂಪನಿ ನನ್ನ ಹೋರಾಟದ ಕಾಪಿ ಮಾಡಬಾರದು. ವಿನೂತನವಾಗಿ ಚಳವಳಿ ಇದ್ದರೆ ಮಾಡಲಿ. ಎತ್ತಿನಗಾಡಿ ಚಳವಳಿಯನ್ನು ನಾನು ಈ ಹಿಂದೆಯೇ ಮಾಡಿದ್ದೇನೆ ಎಂದು ವಾಟಾಳ್ ಹೇಳಿದರು.
ವಾಟಾಳ್ ಬಂಧನ, ಬಿಡುಗಡೆ : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ವೇಳೆ ಸೌದೆೆ ಒಲೆ ಹಾಕಿ ಬಿಸಿ ನೀರು ಕಾಯಿಸಲು ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ, ಇದು ಸಾರ್ವಜನಿಕ ಬಸ್ ನಿಲ್ದಾಣ. ಇಲ್ಲಿ ಬೆಂಕಿ ಹಾಕುವ ಹಾಗಿಲ್ಲ ಎಂದು ಸಂಘಟನೆ ಮುಖಂಡರಿಗೆ ಸೂಚಿಸಿದರು. ಆದರೆ ನೀರಿನ ಹಂಡೆ ಇಟ್ಟು ಒಲೆ ಹಚ್ಚಲು ಮುಂದಾದಾಗ ಪೊಲೀಸರು ವಾಟಾಳ್ ನಾಗರಾಜ್ ಮತ್ತು ಕನ್ನಡ ಪರ ಹೋರಾಟಗಾರನ್ನು ಬಂಧಿಸಿ, ಬಳಿಕ ಬಿಡುಗೆ ಮಾಡಿದರು.