ರಾಜ್ಯದ ಬೊಕ್ಕಸ ಬರಿದಾಗಿಸಿದ ಕೈ

cpt
Published on

ಚನ್ನಪಟ್ಟಣ  : ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತಾಲೂಕು ಬಿಜೆಪಿ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ತನ್ನ ಅವೈಜ್ಞಾನಿಕ ನಿಲುವುಗಳಿಂದ ರಾಜ್ಯದ ಬೊಕ್ಕಸ ಬರಿದಾಗಿಸಿದೆ. ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಹೊರೆ ಹಾಕುತ್ತಿರುವುದೇ ಈ ಸರ್ಕಾರದ ಸಾಧನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಬಡವರನ್ನು ಸುಲಿಗೆ ಮಾಡಲಾಗುತ್ತಿದೆ. ಹಾಲಿಗೆ 4 ರೂ. ಹೆಚ್ಚಿಸಿ ಆ ಹಣವನ್ನು ರೈತರಿಗೆ ಕೊಡದೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬಳಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ನಿರಂತರವಾಗಿ ನಡೆಯುತ್ತಿರುವ ಬೆಲೆ ಏರಿಕೆಗಳಿಂದ ಬಡವರ ಬದುಕು ಬೀದಿಗೆ ಬಂದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ರಸ್ತೆಗಳಲ್ಲಿ ಮನೆ ಮುಂದೆ ನಿಲ್ಲಿಸುವ ವಾಹನಗಳಿಗೂ ತೆರಿಗೆ ಹಾಕಲಾಗುತ್ತಿದೆ, ಇದರೊಂದಿಗೆ ಕಸಕ್ಕೂ ತೆರಿಗೆ ಹಾಕಿ, ಕುಡಿಯುವ ನೀರಿನ ಶುಲ್ಕವನ್ನೂ ಹೆಚ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿರುವ ಈ ಸರ್ಕಾರದ ತೊಲಗಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡುತ್ತದೆ ಎಂದರು.

ನಗರ ಅಧ್ಯಕ್ಷ ಎಲೇಕೇರಿ ರವೀಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಲೂಟಿ ಸರ್ಕಾರವಾಗಿದೆ. ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ರೈತರು ಟಿಸಿ ಹಾಕಿಸಿಕೊಳ್ಳಲು 25 ಸಾವಿರ ಇದ್ದ ಶುಲ್ಕವನ್ನು 3 ಲಕ್ಷ ಕ್ಕೆ ಹೆಚ್ಚಿಸಿದ್ದಾರೆ. ಸಣ್ಣ ರೈತರು ವ್ಯವಸಾಯ ಮಾಡಲು ಆಗದ ಸ್ಥಿತಿ ನಿರ್ಮಿಸಿದ್ದಾರೆ. ಇಂತಹ ರೈತ ವಿರೋಧಿ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹುಲುವಾಡಿ ದೇವರಾಜು, ಜಿಲ್ಲಾ ಉಪಾಧ್ಯಕ್ಷ ಕೆಲಗೆರೆ ಜಯರಾಂ, ಮುಖಂಡರಾದ ಶ್ರೀಕಂಠ, ಗುರುರಾಜ್, ಎಲೇಕೇರಿ ಮಂಜುನಾಥ್, ಕೋಟೆ ಆನಂದ್, ಚೇತನ್ ಶಿವಲಿಂಗಯ್ಯ, ಸಿದ್ದನಹಳ್ಳಿ ಸಿದ್ದೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net