

ಗೋಕರ್ಣ: ರಾಜ್ಯದ ಪ್ರಮುಖ ಯಾತ್ರಾ ಸ್ಥಳ ಗೋಕಣವು ಕಸ ಮತ್ತು ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಬ್ಲಾಕ್ ಸ್ಪಾಟ್ (ಕಪ್ಪು ಸ್ಥಳ) ಪಟ್ಟಿಯಲ್ಲಿ ಸೇರಿರುವುದು ವಿಷಾದನೀಯ. ಗೋಕರ್ಣದ ಸಂಪೂರ್ಣ ಸ್ವಚ್ಛತೆಗಾಗಿ ಜಿಲ್ಲಾ ಪಂಚಾಯಿತಿಯಿಂದ ಗ್ರೀನ್ ಗೋಕರ್ಣ ಅಭಿಯಾನ ಆಯೋಜಿಸಲಾಗಿದೆ. ಇದಕ್ಕೆ ಅಗತ್ಯವಿರುವ ಅನುದಾನವನ್ನು ವಿಶ್ವ ಬ್ಯಾಂಕ್ನಿಂದ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಪಂ ಸಿಇಒ ಈಶ್ವರ ಕಾಂದೂ ಹೇಳಿದರು.
ಇಲ್ಲಿನ ಪಂಚಾಯಿತಿಯಲ್ಲಿ ಜಿಪಂ ವತಿಯಿಂದ ಶನಿವಾರ ಸ್ವಚ್ಛತೆ ನಿಮಿತ್ತ ನಡೆದ ವಿಶೇಷ ಸಭೆಯಲ್ಲಿ ನಾಗರಿಕರ, ವಿವಿಧ ಸಂಘ ಸಂಸ್ಥೆ ಪ್ರತಿನಿಧಿಗಳ ಮತ್ತು ಪಂಚಾಯಿತಿ ಸದಸ್ಯರ ಅಭಿಪ್ರಾಯ ಆಲಿಸಿ ಅವರು ಮಾತನಾಡಿದರು.
ನಿತ್ಯ 20 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಭೇಟಿ ಕೊಡುವ ಗೋಕರ್ಣದಲ್ಲಿ ಪ್ಲಾಸ್ಟಿಕ್ ಕಸ, ಹೋಟೆಲ್, ರೆಸ್ಟೋರೆಂಟ್ ಹಾಗೂ ಮುಂತಾದವುಗಳಿಂದ ಸಾರ್ವಜನಿಕ ಸ್ಥಳಗಳಿಗೆ ಬಿಡಲಾಗುವ ಕಲ್ಮಶ ತ್ಯಾಜ್ಯಗಳು ಬಹು ದೊಡ್ಡ ಸಮಸ್ಯೆಯಾಗಿದೆ. ಇವುಗಳನ್ನು ನಿಯಂತ್ರಿಸಲು ಸಭೆಯಲ್ಲಿ ಆಗ್ರಹಿಸಲಾದಂತೆ ಪ್ರವಾಸಿಗರು ಅಧಿಕವಾಗಿ ಭೇಟಿ ಕೊಡುವ ಬೀಚ್, ಮಂದಿರ ಮುಂತಾದ ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ಹೆಚ್ಚಿನ ಕಸದ ತೊಟ್ಟಿ ಇಡಲು ಕ್ರಮ ಜರುಗಿಸಲಾಗುವುದು. ಇದರೊಂದಿಗೆ ಊರಿನ ಎಲ್ಲ ತ್ಯಾಜ್ಯಗಳು ಸಾರ್ವಜನಿಕ ಗಟಾರ ಮತ್ತು ಹಳ್ಳಗಳ ಮೂಲಕ ಅಂತಿಮವಾಗಿ ಸಮುದ್ರ ತೀರದಲ್ಲಿನ ಸಂಗಮ ನಾಲೆ ಸೇರುತ್ತಿದೆ. ಇದರಿಂದ ಸಮುದ್ರ ತೀರದ ಪರಿಸರ ವಾಸನೆಯಿಂದ ತುಂಬಿ ವಾತಾವರಣ ಹದಗೆಡಲು ಕಾರಣವಾಗಿದೆ. ಹೀಗಾಗಿ ವಿಶ್ವ ಬ್ಯಾಂಕ್ ಸಹಾಯದಿಂದ ಸಂಗಮ ನಾಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಈಗಾಗಲೇ ಸಮೀಕ್ಷೆ ನಡೆಸಿ ಯೋಜನೆ ಸಿದ್ಧಪಡಿಸಲಾಗಿದೆ. ಇದರ ಜತೆಗೆ ಕಸ ಮತ್ತು ತ್ಯಾಜ್ಯ ಸಂಗ್ರಹಣೆ ಮತ್ತು ಸಂಸ್ಕರಣೆಗಾಗಿ ಆಧುನಿಕ ಘಟಕ ಪ್ರಾರಂಭಿಸಲು ಮತ್ತು ನೂತನ ಆವಿಷ್ಕಾರದ ಜಟಾಯು ಯಂತ್ರ ಪಡೆಯುವ ಬಗ್ಗೆಯೂ ಪ್ರಯತ್ನಿಸಲಾಗುವುದು ಎಂದರು.
ಸಾಕಷ್ಟು ತ್ಯಾಜ್ಯ ಸಂಗ್ರಹವಾಗುತ್ತಿರುವ ಮುಖ್ಯ ಹಳ್ಳಗಳನ್ನು ಸ್ವಚ್ಛಮಾಡಲಾಗುವುದು. ಇಲ್ಲಿ ಸಾರ್ವಜನಿಕರು ಕಸ ಹಾಕದಂತೆ ತಡೆಯಲು ಅಗತ್ಯವಿರುವ ಕಡೆಗಳಲ್ಲಿ 350 ಮೀ. ಅಂದಾಜು ತಡೆಗೋಡೆ ನಿರ್ವಿುಸಲು ಸಣ್ಣ ನೀರಾವರಿ ಇಲಾಖೆ ಯೋಜನೆ ತಯಾರಿಸಿದೆ. ಸರ್ಕಾರದ ಅನುದಾನವೂ ಮಂಜೂರಾಗಿದ್ದು ಮಳೆಗಾಲದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ ಎಂದರು.
ಜಿಪಂ ಅಧಿಕಾರಿ ಸೂರ್ಯನಾರಾಯಣ ಭಟ್ಟ, ಅರಣ್ಯ ಇಲಾಖೆ ಎಸಿಎಫ್ ಜಿ. ಲೋಹಿತ್, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಅಮಿತಾ ತಳೇಕರ, ಜಿಪಂ ಉಪಕಾರ್ಯದರ್ಶಿ ನಾಗೇಶ ರಾಯ್ಕರ, ಇಂಜಿನಿಯರಿಂಗ್ ವಿಭಾಗದ ಸಂಜೀವ ನಾಯಕ ಮುಂತಾದವರು ಮಾತನಾಡಿದರು. ಸ್ಥಳೀಯ ಪಂಚಾಯಿತಿ ಸದಸ್ಯರು, ನಾಗರಿಕರು, ಹೋಟೆಲ್, ರೆಸ್ಡೋರೆಂಟ್ ಸಂಬಂಧಿಸಿದವರು ಅಗತ್ಯ ಮಾಹಿತಿ ಮತ್ತು ಸಲಹೆಗಳನ್ನಿತ್ತರು. ಪೊಲೀಸ್, ಅರಣ್ಯ, ಆರೋಗ್ಯ, ಇಂಜಿನಿಯರಿಂಗ್ ವಿಭಾಗ ಮುಂತಾದ ಇಲಾಖೆಗಳ ಅಧಿಕಾರಿಗಳು ಇದ್ದರು.
ಪಿಡಿಒ ವಿನಯಕುಮಾರ, ಕಾರ್ಯದರ್ಶಿ ವಿನಾಯಕ ಸಿದ್ದಾಪುರ ಮತ್ತು ಸಿಬ್ಬಂದಿ ನಿರ್ವಹಿಸಿದರು.