

*ಶಾಸಕ ಸಿ.ಪಿ.ಯೋಗೇಶ್ವರ್ ಅಧಿಕಾರಿಗಳಿಗೆ ಸೂಚನೆ
*ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಸಭೆ
ರಾಮನಗರ
ಕಾಡನೇ ಹಾವಳಿ ತಡೆಯಲು ಕಾವೇರಿ ವನ್ಯ ಜೀವಿಧಾಮದಲ್ಲಿ ಆನೆ ಕಾರ್ಯಪಡೆ ರಚನೆ ಹಾಗೂ ಮುತ್ತತ್ತಿಯಲ್ಲಿ ಆನೆಧಾಮ ಆರಂಭಿಸಲು ಬೇಕಾದ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಹೆಚ್ಚಿರುವ ಆನೆ ಹಾವಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಸಭೆ ಯೋಗೇಶ್ವರ್ ಸಭೆ ನಡೆಸಿದರು.
ಚನ್ನಪಟ್ಟಣ ತಾಲೂಕಿನಲ್ಲಿ ನೀರಾವರಿ ಯೋಜನೆ ಜಾರಿಯಾದ ಬಳಿಕ ಕೆರೆಗಳು ತುಂಬಿವೆ, ಇದರ ಪರಿಣಾಮ ಆನೆಗಳು ಇಲ್ಲೆ ನೆಲೆ ನಿಂತಿದ್ದು, ಅವುಗಳನ್ನು ಎಷ್ಟೇ ಬಾರಿ ಓಡಿಸಿದರೂ ಮತ್ತೆ ಮತ್ತೇ ಇಲ್ಲಿಗೆ ಬರುತ್ತಿವೆ. ಇದಕ್ಕೆಲ್ಲ ಆನೆ ಸೆರೆ ಕಾರ್ಯಾಚರಣೆಯೆ ಅಂತಮವಾಗಿದ್ದು, ನಾಲ್ಕು ಆನೆಗಳನ್ನು ಹಿಡಿಯಲು ಅನುಮತಿ ಕೊಡಿಸುವುದಾಗಿ ಹೇಳಿದರು.
ಆನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಪೂರ್ಣಗೊಳ್ಳದಿರುವುದು, ಆನೆ ಟಾಸ್ಕ್‌ಪೋರ್ಸ್‌ಗೆ ಅಗತ್ಯ ಸಿಬ್ಬಂದಿ ಇಲ್ಲದಿರುವುದು, ವಾಹನಗಳ ಸಮಸ್ಯೆ, ಅತ್ಯಾಧುನಿಕ ತಂತ್ರಜ್ಞಾನಗಳ ಕೊರತೆ ಸೇರಿ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಶಾಸಕರ ಗಮನ ಸೆಳೆದಾಗ ಈ ಬಗ್ಗೆ ಅರಣ್ಯ ಸಚಿವರ ಜತೆ ಚರ್ಚಿಸಿ ಅಗತ್ಯ ಸವಲತ್ತುಗಳನ್ನು ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
ಸಭೆಗೆ ಆಗಮಿಸಿದ್ದ ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ ಶಾಸಕರಿಗೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸುತ್ತಾ, ಇದಕ್ಕೆಲ್ಲ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು. ಆನೆಗಳ ಹಾವಳಿ ಈ ಭಾಗದ ರೈತರಿಗೆ ಒಂದು ಶಾಪವಾಗಿ ಪರಿಣಮಿಸಿದ್ದು, ಆನೆದಾಳಿಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಸರ್ಕಾರ ಕೊಡುವ ಮೂರುಕಾಸಿನ ಪರಿಹಾರದ ಬದಲು ಆನೆಗಳನ್ನು ಸೆರೆ ಹಿಡಿಯುವುದಾಗಲಿ, ಸ್ಥಳಾಂತರ ಮಾಡುವುದಾಗಲಿ ಮಾಡುವಂತೆ ಮನವಿ ಮಾಡಿಕೊಂಡರು.
ಸಭೆಯಲ್ಲಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ 20ಕ್ಕೂ ಹೆಚ್ಚು ಆನೆಗಳು ಬಿಡುಬಿಟ್ಟಿದ್ದು, ಇವುಗಳನ್ನು ಎಷ್ಟು ಬಾರಿ ಓಡಿಸಿದರೂ ಮತ್ತೆ ಸ್ವಸ್ಥಾನಕ್ಕೆ ಮರಳುತ್ತಿದ್ದು, ಮಕ್ನಾ, ಟಸ್ಕರ್ ಸೇರಿ ನಾಲ್ಕು ಗಂಡಾನೆಗಳು ಸಾಕಷ್ಟು ಸಮಸ್ಯೆ ಉಂಟು ಮಾಡುತ್ತಿದ್ದು, ಇವುಗಳನ್ನು ಹಿಡಿಯಲು ಅನುಮತಿ ಕೊಡಿಸಬೇಕೆಂದರು. ತಕ್ಷಣ ಅರಣ್ಯ ಇಲಾಖೆಯ ಎಪಿಸಿಸಿಎಫ್ ಅವರ ಜತೆಗೆ ಮಾತನಾಡಿದ ಯೋಗೇಶ್ವರ್, ಸಮಸ್ಯೆ ಮನವರಿಕೆ ಮಾಡಿಸಿ ಆನೆ ಸೆರೆ ಕಾರ್ಯಾಚರಣೆಗೆ ಅನುಮತಿ ನೀಡುವಂತೆ ಕೇಳಿಕೊಂಡು, ಅಧಿವೇಶನ ಮುಗಿದ ಬಳಿಕ ಸೆರೆ ಕಾರ್ಯಾಚರಣೆ ಪ್ರಾರಂಭ ಮಾಡೋಣವೆಂದರು.
ಎಡಿಸಿ ಆರ್. ಚಂದ್ರಯ್ಯ, ಕಾವೇರಿ ವನ್ಯ ಜೀವಿಧಾಮದ ಡಿಸಿಎಫ್ ಸುರೇಂದ್ರ, ಎಸಿಎಫ್‌ಗಳಾದ ಪುಟ್ಟಮ್ಮ, ನಾಗೇಂದ್ರ ಪ್ರಸಾದ್, ವಲಯ ಅರಣ್ಯಾಧಿಕಾರಿ ಮಲ್ಲೇಶ್, ಅನಿಲ್, ಮುಖಂಡರಾದ ಬಸವೇಶ್, ಅರಳಾಳಸಂದ್ರ ಶಿವಪ್ಪ, ಶಿವಣ್ಣ, ಬೈರಶೆಟ್ಟಿಹಳ್ಳಿ ಮಲ್ಲಿಕಾರ್ಜುನ್, ಲೋಕೇಶ್. ಸತೀಶ್, ಮೆಣಸಿಗನಹಳ್ಳಿ ಪುನೀತ್ ಸೇರಿ ಅನೇಕರು ಹಾಜರಿದ್ದರು.
ಅರಣ್ಯ ಇಲಾಖೆಯಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೇಕಾದ ಎಲ್ಲ ನೆರವು ಕೊಡಿಸುವ ಪ್ರಯತ್ನ ಮಾಡಲಾಗುವುದು. ಅದೇ ರೀತಿ ಅರಣ್ಯ ಇಲಾಖೆ ಅಧಿಕಾರಿಗಳೂ ತಮ್ಮ ಶಕ್ತಿ ಮೀರಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಪ್ರತಿ ತಿಂಗಳು ಸಭೆಯನ್ನು ನಡೆಸುವ ಮೂಲಕ ಪ್ರಗತಿ ಪರಿಶೀಲನೆ ಮಾಡಲಾಗುವುದು. ಒಂದು ವೇಳೆ ಅಧಿಕಾರಿಗಳು ಸಮಸ್ಯೆ ಪರಿಹಾರ ಮಾಡುವಲ್ಲಿ ವಿಫಲರಾದರೆ ಖಂಡಿತವಾಗಿ ಅಂತಹ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಯೋಗೇಶ್ವರ್ ಎಚ್ಚರಿಕೆ ನೀಡಿದರು.