

ಖಾನಾಪುರ: ನಾಲ್ಕು ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಭೇದಿಸಿದ ಖಾನಾಪುರ ಪೊಲೀಸರು ಬೈಕ್, ಕ್ಯಾಮರಾ, ಕಾರ್ ಸೇರಿ 14.90 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜೋಯ್ಡಾದ ಸಮೀರ್ ಸೂರಜ್ ಪಾಟೀಲ್, ಪಾರೀಶ್ವಾಡ ಗ್ರಾಮದ ಶೋಯಬ್ ರಫೀಕ್ ಮಾರಿಹಾಳ, ಶುಭಾನಿ ರಾಜೇಸಾಬ್ ಟೋಲ್ಗಿ, ಅತ್ೀ ಸಲಾವುದ್ದೀನ್ ಸಂದಿ, ಅಜೀಜ್ ಬಾಬಾಸಾಬ್ ತಲ್ಲೂರ್ ಬಂಧಿತ ಆರೋಪಿಗಳು.
ಜುಲೈ 2, 2025ರಂದು ಗರ್ಲಗುಂಜಿಯ ಮಹೇಶ ಕುಂಬಾರ ಅವರು ಖಾನಾಪುರದ ಗಣೇಶ ಕಾಲನಿಯಲ್ಲಿ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಕದ್ದಿದ್ದಾರೆಂದು ನೀಡಿದ್ದ ದೂರಿನನ್ವಯ ಖಾನಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ, 2.90 ಲಕ್ಷ ರೂ. ಮೌಲ್ಯದ ಬೈಕ್ ವಶ ಪಡೆದಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕ್ಯಾನನ್ ಕಂಪನಿಯ ಕ್ಯಾಮರಾ ಮತ್ತು ಲೆನ್ಸ್ ಜಪ್ತಿ ಮಾಡಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳಿಂದ 3.60 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶ ಪಡೆಯಲಾಗಿದೆ.
ಜೆಸಿಬಿಯ ಕೆಲ ಭಾಗಗಳನ್ನು ಕದ್ದಿರುವ ದೂರಿನ ಆಧಾರದ ಮೇಲೆ 4.80 ಲ ರೂ. ಮೌಲ್ಯದ ವಸ್ತುಗಳು ಮತ್ತು ಕಳ್ಳತನಕ್ಕೆ ಬಳಸಿದ ಗೂಡ್ಸ್ ವಾಹನ ವಶಪಡಿಸಿಕೊಳ್ಳಲಾಗಿದೆ. ಮಾರ್ಚ್ 4, 2025ರಂದು ಖಾನಾಪುರ ತಾಲೂಕಿನ ಗಂಗವಾಲಿ ಗ್ರಾಮದ ಬಳಿ ನಿಲ್ಲಿಸಿದ್ದ ಕಾರನ್ನು ಕದ್ದಿರುವುದಾಗಿ ಬೆಳಗಾವಿಯ ಸೋನಾರ ಗಲ್ಲಿಯ ಸುನೀತಾ ಲೋಹಾರ ನೀಡಿದ ದೂರಿನನ್ವಯ ಖಾನಾಪುರ ಪೊಲೀಸರು 4.50 ಲ ರೂ. ಮೌಲ್ಯದ ಕಾರನ್ನು ವಶಪಡೆದಿದ್ದಾರೆ.
ಡಿಎಸ್ಪಿ ವೀರಯ್ಯ ಮಠಪತಿ, ಪೊಲೀಸ್ ಇನ್ಸ್ಪೆಕ್ಟರ್ ಎಲ್.ಎಚ್. ಗವಡಿ, ಪೊಲೀಸ್ ಸಬ್&ಇನ್ಸ್ಪೆಕ್ಟರ್ ಮಾಲಣ್ಣಗೌಡ ಬಿರಾದಾರ, ಎ.ಒ. ನಿರಂಜನ್, ಪಿಎಸ್ಐ (ಹೆಚ್ಚುವರಿ) ಮತ್ತು ಸಿಬ್ಬಂದಿ ಬಿ.ಜಿ. ಯಲಿಗಾರ, ಜೆ.ಐ. ಕಾದ್ರೋಳಿ, ಬಿ.ಎಸ್. ನಾಯಕ ಮಾರ್ಗದರ್ಶನದಲ್ಲಿ ಜಿಲ್ಲಾ ತಾಂತ್ರಿಕ ಕೋಶ ವಿಭಾಗದ ವಿನೋದ ಟಕ್ಕಣ್ಣವರ, ಸಚಿನಾ ಪಾಟೀಲ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.