ಸಮಯಕ್ಕೆ ಸರಿಯಾಗಿ ಕೆಲಸ ಪ್ರಾರಂಭಕ್ಕೆ ತಾಕೀತು

ಸಮಯಕ್ಕೆ ಸರಿಯಾಗಿ ಕೆಲಸ ಪ್ರಾರಂಭಕ್ಕೆ ತಾಕೀತು
Published on

ಸೋಮವಾರಪೇಟೆ: ಹೆಚ್ಚಿನ ಕಾರ್ಮಿಕರನ್ನು ತುಂಬಿಸಿಕೊಂಡು ಬೆಳಗ್ಗೆ 10.30ರ ಸಮಯದಲ್ಲಿ ಶಾಂತಳ್ಳಿ ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಪಿಕಪ್ ವಾಹನವನ್ನು ಶಾಂತಳ್ಳಿ ಗ್ರಾಮದ ಜಂಕ್ಷನ್‌ನಲ್ಲಿ ಮಂಗಳವಾರ ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ತಡೆದು, ಪಿಕಪ್ ವಾಹನ ಮಾಲೀಕನಿಗೆ ಬುದ್ಧಿ ಹೇಳಿದರು.

ಕಾರ್ಮಿಕರು ಸಮಯಕ್ಕೆ ಸರಿಯಾಗಿ ಕೆಲಸ ಪ್ರಾರಂಭಿಸುತ್ತಿಲ್ಲ. ಕೆಲವು ಪಿಕಪ್ ವಾಹನ ಮಾಲೀಕರು ಬೆಳಗ್ಗೆ 9ಗಂಟೆಗೆ ಕಾಫಿ ತೋಟಕ್ಕೆ ಬಿಡುತ್ತಿಲ್ಲ. ಕೆಲ ಕಾರ್ಮಿಕರು ದುಪ್ಪಟ್ಟು ಕೂಲಿ ಕೇಳುತ್ತಿದ್ದಾರೆ. ಇದರಿಂದ ಬೆಳೆಗಾರರಿಗೆ ಸಮಸ್ಯೆಯಾಗಿದೆ ಎಂದು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ ಬೇಸರ ವ್ಯಕ್ತಪಡಿಸಿದರು.

ಬೆಳಗ್ಗೆ 9ಗಂಟೆಯಿಂದ ಸಂಜೆ 4ಗಂಟೆಯವರೆಗೆ ಕಾರ್ಮಿಕರು ತೋಟದಲ್ಲಿ ಕೆಲಸ ಮಾಡಲೇಬೇಕು. ಮಹಿಳೆಯರಿಗೆ ಮತ್ತು ಪುರುಷರ ಕೆಲಸಕ್ಕೆ ಅನುಗುಣವಾಗಿ ಬೆಳೆಗಾರರು ಕೂಲಿ ನಿರ್ಧಾರ ಮಾಡಿದ್ದಾರೆ. ಅದರಂತೆ ಕಾರ್ಮಿಕರು ಸಹಕಾರ ನೀಡಬೇಕು ಎಂದು ಹೇಳಿದರು.

ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದ ಶೇ.60 ರಷ್ಟು ಕಾಫಿ ಫಸಲು ಹಾನಿಯಾಗಿದೆ. ಸರ್ಕಾರದಿಂದ ನಯಾಪೈಸೆ ಪರಿಹಾರ ಹಣ ಸಿಕ್ಕಿಲ್ಲ. ಎಕರೆಗೆ ಮೂರು ಚೀಲ ಕಾಫಿ ಕಟಾವು ಮಾಡಿದವರು ಇದ್ದಾರೆ. ಬೆಲೆ ಹೆಚ್ಚಾದರೂ ಬೆಳೆಗಾರರಿಗೆ ಪ್ರಯೋಜನವಿಲ್ಲದಂತಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ಕಾರ್ಮಿಕರು, ಪಿಕಪ್ ವಾಹನ ಮಾಲೀಕರು, ಮೇಸ್ತ್ರಿಗಳನ್ನು ಕರೆದು ಮನವರಿಗೆ ಮಾಡಿಕೊಟ್ಟಿದ್ದೇವೆ. ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕೂಲಿಗಿಂತ ಹೆಚ್ಚು ಕೂಲಿಯನ್ನು ಬೆಳೆಗಾರರು ನೀಡುತ್ತಿದ್ದಾರೆ. ಕೂಲಿಗೆ ತಕ್ಕದಾದ ಕೆಲಸ ಮಾಡಲೇಬೇಕು. ನಿಗದಿ ಪಡಿಸಿದ ಸಮಯದಂತೆ ಕೆಲಸ ಮಾಡಬೇಕು. ವಿಪರೀತ ತೊಂದರೆ ಕೊಟ್ಟರೆ ಮುಂದಿನ ದಿನಗಳಲ್ಲಿ ತಾಲೂಕಿನ ಕಾಫಿ ಬೆಳೆಯುವ ರೈತರು 15 ದಿನಗಳ ಕಾಲ ಕೂಲಿ ಕೆಲಸವನ್ನು ನಿಲ್ಲಿಸುತ್ತೇವೆ. ಮುಂದಾಗುವ ಸಮಸ್ಯೆಗಳಿಗೆ ಕಾರ್ಮಿಕರು, ಬಾಡಿಗೆ ವಾಹನಗಳ ಮಾಲೀಕರು ಕಾರಣರಾಗಬೇಕಾಗುತ್ತದೆ ಎಂದು ಹೇಳಿದರು. ಬೆಳೆಗಾರರ ಸಂಘದ ರಾಮಚಂದ್ರ, ಹರಗ ಶರಣ್, ಡಾಲಿ ಪ್ರಕಾಶ್, ಶಾಂತಳ್ಳಿ ಲಿಂಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net