

ಮಾಗಡಿ
ಮೀನು ಕೃಷಿಯನ್ನು ಉತ್ತೇಜಿಸಲು ಮೀನುಗಾರರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಕೇಂದ್ರಿಯ ಒಳನಾಡು ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಸಂತ್ ಕುಮಾರ್ ದಾಸ್ ಹೇಳಿದರು.
ತಾಲೂಕಿನ ಮಂಚನಬೆಲೆ ಅವ್ವೇರಹಳ್ಳಿ ಬಳಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮೀನುಗಾರರಿಗೆ ಮೀನುಮರಿ, ಮೀನುಗಾರಿಕೆ ಉಪಕರಣಗಳನ್ನು ವಿತರಿಸಿ ಮಾತನಾಡಿ, ಬೆಂಗಳೂರು ಹಾಗೂ ಕೇಂದ್ರೀಯ ಒಳನಾಡು ಮೀನುಗಾರಿಕೆ ಸಂಶೋಧನಾ ಕೇಂದ್ರದಿಂದ ಮಂಚನಬೆಲೆ ಜಲಾಶಯಕ್ಕೆ ಗೆಂಡೆ ಜಾತಿಯ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಜಾತಿಯ 50 ಸಾವಿರ ಮೀನುಮರಿಗಳನ್ನು ಬಿಡಲಾಯಿತು. ಮೀನು ಕೃಷಿಕರ ಶ್ರಮ ಹಾಗೂ ಸಮರ್ಪಣೆಯನ್ನು ಗೌರವಿಸಲಾಗುತ್ತಿದೆ. ಮೀನುಗಾರಿಕೆ ವರ್ಧನೆ, ಒಳನಾಡು ಮೀನು ಕೃಷಿಯಲ್ಲಿ ನಾವಿನ್ಯತೆಯ ಪ್ರಯೋಗಗಳ ಬಗ್ಗೆ ತಿಳಿಸಿದರು.
ವಿಜ್ಞಾನಿ ಡಾ.ಪ್ರೀತಾ ಪಣಿಕ್ಕರ್ ಮಾತನಾಡಿ, ದೇಶ ಜಲಕೃಷಿ ಉದ್ಯಮಕ್ಕೆ ಆದಾಯ ವೃದ್ಧಿಗೆ ಮೀನು ಕೃಷಿಕರ ಕೊಡುಗೆ ಅನನ್ಯವಾಗಿದೆ. ಮೀನುಗಾರರಿಗೆ ಕೇಂದ್ರದಿಂದ ಸಾಕಷ್ಟು ಸಹಕಾರ, ಸಲಹೆ ನೀಡಲಾಗುತ್ತಿದೆ. ಈ ಸಂ ಉತ್ತಮ ಲಾಭದತ್ತ ನಡೆಯುತ್ತಿರುವುದರಿಂದ ಹೆಚ್ಚು ಮೀನುಗಾರಿಕೆ ಸಲಕರಣೆ ನೀಡಲಾಗುತ್ತಿದೆ ಎಂದರು.
ಅವ್ವೇರಹಳ್ಳಿ ಪುನರ್ ವಸತಿ ಕಾಲನಿ ಮೀನುಗಾರರ ಸಹಕಾರ ಸಂದ ನಿರ್ದೇಶಕ ಮಂಚನಬೆಲೆ ಲೋಕೇಶ್ ಮಾತನಾಡಿ, ನಮ್ಮ ಸಹಕಾರ ಸಂಘದಿಂದ ಪ್ರತಿ ವರ್ಷ ಮೀನು ಮರಿಗಳನ್ನು ವಿತರಿಸುತ್ತಿದ್ದಾರೆ. ಮಂಚನಬೆಲೆ ಜಲಾಶಯಕ್ಕೆ ಅವ್ವೇರಹಳ್ಳಿ ಗ್ರಾಮ ಮುಳುಗಡೆಯಾದ ಕಾರಣ 7 ಗ್ರಾಮಗಳ ಜನರು ಜೀವನ ಮಾಡುವ ಉದ್ದೇಶದಿಂದ 25 ಮನೆಗಳನ್ನು ನಿರ್ಮಿಸಿಕೊಂಡು, ಅವ್ವೇರಹಳ್ಳಿ ಪುನರ್ ವಸತಿ ಕಾಲನಿ ಮೀನುಗಾರರ ಸಹಕಾರ ಸಂಘ ಆರಂಭಿಸಲಾಗಿದೆ. ಸಂಘದಲ್ಲಿ 150 ಸದಸ್ಯರಿದ್ದು, 60 ಮಂದಿ ಮೀನುಗಾರರಿದ್ದಾರೆ. ಸಂಘದಿಂದ ಮೀನು ಖರೀದಿ, ಮೀನು ಬಿತ್ತನೆ, ಮೀನುಗಾರರಿಗೆ ಬೋನಸ್ ವಿತರಣೆ, ಮೀನುಗಾರರಿಗೆ ಇನ್ಶೂರೆನ್ಸ್, ಮೀನುಗಾರರು ಮೃತಪಟ್ಟರೆ ಅವರ ಕುಟುಂಬಕ್ಕೆ ನೆರವು ನೀಡಿ 70 ಲಕ್ಷ ರೂ. ಬ್ಯಾಂಕ್ನಲ್ಲಿಡಲಾಗಿದೆ ಎಂದರು.
ನಬಾರ್ಡ್ ಜನರಲ್ ಮ್ಯಾನೇಜರ್ ಪ್ರಕಾಶ್ ಚಂದ್ರರಾವ್, ಕೇಂದ್ರದ ವಿಜ್ಞಾನಿಗಳಾದ ಡಾ.ವಿ.ಎಲ್. ರಮ್ಯಾ, ಪಿ.ಕೆ ಜಶ್ನಾ , ಡಾ.ಸೋನಾಲಿಕ ಸಾಹ್, ಡಾ. ಸಿಬೀನಾ ಮೋಲ್, ಸಂದ ಅಧ್ಯಕ್ಷ ನಾರಾಯಣ ಕುಮಾರ್, ಕಾರ್ಯದರ್ಶಿ ಗಂಗಮ್ಮ, ವಿಜ್ಞಾನಿ ಪಿ.ಕೆ.ಜೇಶನ, ದಬ್ಬಗುಳಿ ಪ್ರಕಾಶ್ ಇತರರು ಇದ್ದರು.
ಉಚಿತವಾಗಿ ವಿತರಣೆ
ಅವ್ವೇರಹಳ್ಳಿ ಪುನರ್ ವಸತಿ ಕಾಲನಿ ಮೀನುಗಾರರ ಸಹಕಾರ ಸಂ 1995ರಿಂದ ಉತ್ತಮವಾಗಿ ಮೀನು ಸಾಕಣೆ ಕೆಲಸ ಮಾಡುತ್ತಿದೆ. ಇದರಿಂದಾಗಿ ನಮ್ಮ ಕೇಂದ್ರದಿಂದ ಪರಿಶಿಷ್ಟಜಾತಿ ಅನುದಾನದಿಂದ ತರಬೇತಿ, ಮೀನಿನ ಆಹಾರ, ಬಲೆ, ಕ್ರೇಟ್, ದೋಣಿ, ಮೀನುಮರಿ ಸೇರಿ ಮೀನುಗಾರಿಕೆಗೆ ಬೇಕಾದ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿ ವರ್ಷ ರಾಜ್ಯದ ಹಲವು ಜಲಾಶಯಗಳನ್ನು ಗುರುತಿಸಿ ಸೌಲತ್ತು ನೀಡುತ್ತಿದ್ದು, ಈ ಬಾರಿ ಚಿತ್ರದುರ್ಗದ ಗಾಯತ್ರಿ ಜಲಾಶಯ, ಮಂಚನಬೆಲೆ, ಕಬಿನಿ ಜಲಾಶಯ, ಕುಶಾಲನಗರ ಚಕ್ಳಿ ಹೊಳೆ ಜಲಾಶಯ, ತಮಿಳುನಾಡಿನ ಕೃಷ್ಣಗಿರಿ, ಕೇರಳದ ಬಾಣಾಸುರ ಜಲಾಶಯದ ಮೀನುಗಾರರಿಗೆ ಸವಲತ್ತು ನೀಡಲಾಗುತ್ತಿದೆ ಎಂದು ತಾಂತ್ರಿಕ ಅಧಿಕಾರಿ ಡಾ. ವಿಜಯ್ ಕುಮಾರ್ ಹೇಳಿದರು.