ಜ್ಯೋತಿಗಣೇಶ್​ ಬಗ್ಗೆ ತಪ್ಪು ತಿಳುವಳಿಕೆ ಮುತಾಲಿಕ್​ ವಿಷಾದ

MLA_Mutalik
Published on

ತುಮಕೂರು: ತಪ್ಪು ತಿಳುವಳಿಕೆಯಿಂದಾಗಿ ಸ್ಥಳಿಯ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಲ್ಯಾಂಡ್​ ಜಿಹಾದ್​ನಲ್ಲಿ ಕೈಜೋಡಿಸಿದ್ದಾರೆಂದು ಆರೋಪ ಮಾಡಿದ್ದು ಇದರಲ್ಲಿ ಅವರ ಎಳ್ಳಷ್ಟು ಪಾತ್ರವಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಸ್ಪಷ್ಟಪಡಿಸಿದ್ದಾರೆ

ಸಿದ್ಧಿವಿನಾಯಕ ಮಾರುಕಟ್ಟೆ ಜಾಗದಲ್ಲಿ ಬಹುಮಹಡಿ ಕಟ್ಟಡದ ಮಾಲ್​ ಹಾಗೂ ಪಾರ್ಕಿಂಗ್​ ನಿರ್ಮಾಣ ಕಾಮಗಾರಿಯನ್ನು ನಡೆಸಲು ಲ್ಯಾಂಡ್​ ಜಿಹಾದ್​ನಲ್ಲಿ ಕೈಜೋಡಿಸಿಲ್ಲವೆಂಬುದು ಸ್ಪಷ್ಟವಾಗಿದೆ. ಸಂವಹನದ ಕೊರತೆಯಿಂದ ಅಂದು ನಡೆದ ಸುದ್ದಿಗೋಷ್ಠಿಯಲ್ಲಿ ಜ್ಯೋತಿಗಣೇಶ್​ ವಿರುದ್ಧ ಆರೋಪವನ್ನ ಮಾಡಿರುತ್ತೇನೆ. ಆನಂತರ ಈ ವಿಷಯದ ಮಾಹಿತಿ ಪಡೆದ ಬಳಿಕ ಇದರಲ್ಲಿ ಶಾಸಕರು ಯಾವುದೇ ತಪ್ಪನ್ನು ಮಾಡಿಲ್ಲದಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಹಿಂದುಪರ ಸಂಘಟನೆಗಳ ಒಕ್ಕೂಟ ಹಾಗೂ ಶಾಸಕರ ಮಧ್ಯೆ ಸಂವಹನದ ಕೊರತೆಯಿಂದ ಈ ಅಚಾತುರ್ಯ ನಡೆದಿರುತ್ತದೆ ಎಂದು ಮುತಾಲಿಕ್​ ಬುಧವಾರ ಹಿಂದುಪರ ಸಂಟನೆಗಳ ಒಕ್ಕೂಟದ ಪದಾಧಿಕಾರಿಗಳ ಜತೆಗಿನ ಸಭೆಯಲ್ಲಿ ವಿಷಾದಿಸಿದರು.

ಇನ್ನು ಮುಂದೆ ಶಾಸಕರಿಗಾಗಲಿ ಹಿಂದು ಕಾರ್ಯಕರ್ತರಿಗಾಗಲಿ ಯಾವುದೇ ಭಿನ್ನಾಭಿಪ್ರಾಯ ಇರುವುದಿಲ್ಲ. ಪರಸ್ಪರ ಒಗ್ಗಟ್ಟಿನಿಂದ ಹಾಗೂ ಹೊಂದಾಣಿಕೆಯಿಂದ ಸಮಾಜ ಕಟ್ಟುವ ಕೆಲಸದಲ್ಲಿ ಕೈಜೋಡಿಸುತ್ತಾರೆ. ಈ ಹಿಂದೆ ನಾನು ನಡೆಸಿದ ಸುದ್ದಿಗೋಷ್ಠಿಯಿಂದ ನಗರದ ಶಾಸಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಇನ್ನು ಅತೀ ಹೆಚ್ಚು ಅಂತರದಿಂದ ಜಯಶೀಲರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​, ಹಿಂದು ಜಾಗರಣ ವೇದಿಕೆಯ ಜಿ.ಕೆ.ಶ್ರೀನಿವಾಸ್​, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್​.ನವಚೇತನ್​ ಮತ್ತಿತರರು ಉಪಸ್ಥಿತರಿದ್ದರು.

ಈ ಕಾಂಗ್ರೆಸ್​ ಸರ್ಕಾರ ಬಂದಾಗಿನಿಂದ ಹಿಂದು ಸಂಘಟನೆಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಿಜೆಪಿ ಪಕ್ಷದ ಚಟುವಟಿಕೆಗಳಲ್ಲಿ ಮಂಚೂಣಿಯಲ್ಲಿರುವ ಕಾರ್ಯಕರ್ತರನ್ನು ಗುರುತಿಸಿ, ಅವರ ಮೇಲೆ ಸಂಬಂಧ ಇಲ್ಲದೆ ಕ್ರಿಮಿನಲ್​ ಮೊಕದ್ದಮೆಗಳನ್ನು ಹೂಡಲಾಗುತ್ತಿದೆ. ರೌಡಿ ಶೀಟರ್​ ಪಟ್ಟ ಕಟ್ಟಲು ನೋಟೀಸ್​ಗಳನ್ನು ಕಳುಹಿಸಿ ಕಾರ್ಯಕರ್ತರನ್ನು ಹಿಮ್ಮೆಟ್ಟಿಸುವ ಕಾರ್ಯವನ್ನ ರಾಜ್ಯ ಕಾಂಗ್ರೆಸ್​ ಸರ್ಕಾರ ಮಾಡುತ್ತಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಹೇಳಿದರು.

ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಪೊಲೀಸ್​ ಅಧಿಕಾರಿಗಳೊಂದಿಗೆ ನಮ್ಮ ನಿರಂತರ ಹೋರಾಟವಿತ್ತು. ಆದರೆ ಮುಂದಿನ ದಿನಗಳಲ್ಲಿ ಅದನ್ನು ಮತ್ತಷ್ಟು ತೀವ್ರಗೊಳಿಸಿ ಅನಗತ್ಯವಾಗಿ ಹಿಂದು ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಾಕುತ್ತಿರುವ ಸುಳ್ಳು ಮೊಕದ್ದಮೆಗಳನ್ನ ತಡೆಯಲು ಹೋರಾಟವನ್ನ ರೂಪಿಸುತ್ತೇವೆ. ಕಾರ್ಯಕರ್ತರ ರಕ್ಷಣೆ ಕಾರ್ಯ ಯಾವತ್ತಿದ್ದರೂ ಸಹ ಮೊದಲೆ ಆದ್ಯತೆ ಎಂದು ಭರವಸೆಯಿತ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net