ಜಾತ್ರೆ ಬಳಿಕ ಒಂದು ವರ್ಷ ಶುಭ ಕಾರ್ಯಗಳಿಗೆ ನಿಷೇಧ!; ಗುತ್ತಲ ಗ್ರಾಮದಲ್ಲಿ ಆಚರಣೆಯಲ್ಲಿದೆ ವಿಶೇಷ ಆಚರಣೆ..

Jaathre
Published on

| ಪಿ.ಎನ್. ಹೇಮಗಿರಿಮಠ ಗುತ್ತಲ (ಹಾವೇರಿ)

ಪಟ್ಟಣದಲ್ಲಿ 2022ರ ಏಪ್ರಿಲ್ 8ರಿಂದ ಮುಂದಿನ ಒಂದು ವರ್ಷ ಎಲ್ಲ ಶುಭ ಕಾರ್ಯಗಳಿಗೂ ನಿಷೇಧ! ಮದುವೆ, ಮುಂಜಿ, ಗೃಹ ಪ್ರವೇಶ, ಮನೆ ನಿರ್ವಣಕ್ಕೆ ಭೂಮಿ ಪೂಜೆ ಮತ್ತಿತರ ಶುಭ ಕಾರ್ಯಗಳನ್ನು ಮಾಡಿ ಮುಗಿಸಬೇಕು. ಆನಂತರ ಯಾವುದೇ ಕಾರಣಕ್ಕೂ ಶುಭ ಕಾರ್ಯಗಳು ಮಾಡಕೂಡದು. ಈ ತರನಾದ ನಿಷೇಧಕ್ಕೆ ಕಾರಣ ಗ್ರಾಮ ದೇವತೆಯ ಜಾತ್ರೆ.

ಪ್ರತಿ 5 ವರ್ಷಕ್ಕೊಮ್ಮೆ ಜರುಗುವ ಗ್ರಾಮ ದೇವತೆ ಜಾತ್ರೆ ತರುವಾಯ ಒಂದು ವರ್ಷದವರೆಗೆ ಶುಭ ಕಾರ್ಯಗಳನ್ನು ಮಾಡುವಂತಿಲ್ಲ ಎಂಬ ಪದ್ಧತಿಯಿದೆ. ಈ ಆಚರಣೆಯನ್ನು ಪಟ್ಟಣದ ಎಲ್ಲ ಸಮುದಾಯದವರು ತಪ್ಪದೇ ಪಾಲಿಸುತ್ತಾರೆ. ಜಾತ್ರೆ ಬಂದಿರುವುದರಿಂದ ವಿಶೇಷವಾಗಿ ಮದುವೆ ಕಾರ್ಯಕ್ಕೆ ಲಗುಬಗೆಯಿಂದ ಸಿದ್ಧರಾಗುತ್ತಿದ್ದಾರೆ. ಈಗಾಗಲೆ ಮನೆ ಕಟ್ಟಿಸಬೇಕೆಂದವರು ಭೂಮಿ ಪೂಜೆ ಮಾಡಿ ಮುಂದಿನ ದಿನಗಳಲ್ಲಿ ಮನೆ ಕಟ್ಟಬಹುದೆಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶುಭ ಮುಹೂರ್ತಕ್ಕಾಗಿ ಪುರೋಹಿತರ ಹತ್ತಿರ ಹೋಗಿ ಬರುತ್ತಿರುವುದು ಸಾಮಾನ್ಯವಾಗಿದೆ. ಈ ಎಲ್ಲ ಕಾರಣಗಳಿಂದ ಪ್ರಿಟಿಂಗ್ ಪ್ರೆಸ್​ಗಳು, ಬಣ್ಣದ ಅಂಗಡಿಗಳು, ಪೇಂಟರ್ಸ್, ಕಟ್ಟಡ ಕಾರ್ವಿುಕರು, ಪುರೋಹಿತರು, ಅರ್ಚಕರು, ಕಿರಾಣಿ ವ್ಯಾಪಾರಸ್ಥರಿಗೆ ಬಿಡುವಿಲ್ಲದ ಕೆಲಸ.

ಪೂರ್ವಜರ ನಿರ್ಧಾರ: ಇಂಥ ಪದ್ಧತಿಯನ್ನು ಪೂರ್ವಜರು ಏಕೆ ಆಚರಣೆಗೆ ತಂದರು ಎಂದರೆ ಗ್ರಾಮದಲ್ಲಿನ ಆರ್ಥಿಕ ಶಿಸ್ತು ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಬಹಳ ವರ್ಷಗಳ ನಂತರ ನಡೆಯುವ ಜಾತ್ರೆಯನ್ನೂ ಅದ್ದೂರಿ, ಆಡಂಬರದಿಂದ ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಬಂಧು-ಬಳಗದವರನ್ನು ಕರೆಯಿಸಿ ಭರ್ಜರಿಯಾಗಿ ಖರ್ಚು ಮಾಡುತ್ತಾರೆ. ಜಾತ್ರೆ ತರುವಾಯ ಮನೆಗಳಲ್ಲಿ ಶುಭ ಕಾರ್ಯಗಳು ನಡೆದರೆ ಹಣಕಾಸಿನ ತೊಂದರೆಯಾಗಬಹುದು. ಹಣದ ಅವಶ್ಯಕತೆ ಬಿದ್ದು ಸಾಲ ಮಾಡಿ ತೊಂದರೆಗೆ ಒಳಗಾಗಬಾರದು ಎಂಬ ಸದುದ್ದೇಶದಿಂದ ಹಿರಿಯರು ಇಂಥ ಆಚರಣೆಯನ್ನು ಜಾರಿಗೆ ತಂದಿರಬಹುದು ಎಂಬುದು ಅನೇಕರ ಅಭಿಪ್ರಾಯ. ಇಂದಿನ ದಿನಮಾನ ದಲ್ಲಿಯೂ ಜನರು ಪದ್ಧತಿ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿರುವುದು ವಿಶೇಷ.

ಭರದ ಸಿದ್ಧತೆ: ಗ್ರಾಮ ದೇವತೆ ಜಾತ್ರೆಯಿಂದಾಗಿ ಗುತ್ತಲ ನವವಧುವಿನಂತೆ ಶೃಂಗಾರಗೊಳ್ಳುತ್ತಿದೆ. ಗ್ರಾಮ ದೇವತೆ ದೇವಸ್ಥಾನದ ಗೋಪುರಕ್ಕೆ ಬಣ್ಣ ಹಚ್ಚಲಾಗಿದೆ. ಜಾತ್ರೆಗೆ 3 ತಿಂಗಳು ಬಾಕಿ ಇರುವಾಗಲೇ ಶುಭ ಕಾರ್ಯಗಳನ್ನು ಕೈಗೊಳ್ಳಲು ಪಟ್ಟಣದ ಜನತೆ ಸಿದ್ಧತೆ ಮಾಡಿಕೊಂಡಿ ದ್ದಾರೆ. ಕರೊನಾ ಸೋಂಕು ಹರಡುವುದು ಕಡಿಮೆಯಾಗಲೆಂದು ಎಲ್ಲರೂ ಗ್ರಾಮ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ನಿಯಮಗಳು

  • ಜಾತ್ರೆಗೆ ಅಂಕಿ ಹಾಕಿದ ದಿನದಿಂದ 9 ದಿನಗಳವರೆಗೆ ಪಟ್ಟಣದಲ್ಲಿ ಯಾರೂ ರೊಟ್ಟಿ ಸುಡುವಂತಿಲ್ಲ.
  • ಪಟ್ಟಣದಿಂದ ಯಾವುದೇ ವಸ್ತುಗಳು ಹೊರಗೆ ಹೋಗುವಂತಿಲ್ಲ. ಹೋಗಲೇಬೇಕಾದರೆ ಗಡಿ ಕಾಯುವವರಿಗೆ ಬಳಿ ಸ್ವಲ್ಪ ಭಾಗವನ್ನು ಹಾಕಬೇಕು. ಇಲ್ಲವೇ ಸ್ವಲ್ಪ ಹಣ ನೀಡಿ ತೆರಳಬೇಕು. ಜಾತ್ರೆ ಮುಗಿಯುವವರೆಗೂ ಪಟ್ಟಣದ ಎಲ್ಲ ರಸ್ತೆಗಳಲ್ಲಿ ಗಡಿಕಾಯುವ ಪಡೆಯ ನಿಯೋಜನೆ.
  • ಜಾತ್ರೆಗೆ ಆಗಮಿಸುವ ಮನೆಯ ಹೆಣ್ಣುಮಕ್ಕಳು, ಸೊಸೆಯಂದಿರು ಸೇರಿ ಇತರರಿಗೆ ಅಂಕಿ ಹಾಕುವ ಮುನ್ನವೇ ಉಡಿ ತುಂಬುವುದು ಕಡ್ಡಾಯ. ಅಂಕಿ ಹಾಕಿದ ನಂತರ ಉಡಿ ತುಂಬುವುದು ನಿಷೇಧ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net