ತಹಸೀಲ್ದಾರ್ ಕಚೇರಿಗೆ ಪ್ರಗತಿಪರ ಸಂಘಟನೆಗಳಿಂದ ಮುತ್ತಿಗೆ

SRP_06-01jpj
Published on

ಶ್ರೀರಂಗಪಟ್ಟಣ: ತಾಲೂಕಿನಲ್ಲಿ ಈ ಹಿಂದೆ ಸ್ಥಗಿತಗೊಳಿಸಲಾಗಿದ್ದ ಅಕ್ರಮ ಕ್ರಷರ್‌ಗಳು ಮತ್ತು ಕಲ್ಲು ಕ್ವಾರೆಗಳು ಮತ್ತೆ ಆರಂಭಿಸಲಾಗಿದೆ ಎಂದು ಆರೋಪಿಸಿ ಶನಿವಾರ ಪ್ರಗತಿಪರ ಸಂಘಟನೆಗಳು ಕಾ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ರೈತ ಸಂಘಟನೆ, ದಸಂಸ, ಮಂಡ್ಯ ರಕ್ಷಣ ವೇದಿಕೆ, ಕೆಂಪೇಗೌಡ ಯುವ ಶಕ್ತಿ ವೇದಿಕೆ ಸೇರಿದಂತೆ ಇತರ ಸಂಘಟನೆಗಳ ಮುಖಂಡರು ತಹಸೀಲ್ದಾರ್ ಚೇತನಾ ಯಾದವ್ ಅವರಿಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ದಾಖಲೆಗಳನ್ನು ಮುಂದಿಟ್ಟು ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ಸ್ಪಷ್ಟನೆ ಕೇಳಿದರು.

ರೈತ ಮುಖಂಡ ಮಂಜೇಶ್ ಗೌಡ ಮಾತನಾಡಿ, ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸರ್ವೇ ನಂ.21ರ ಅರಣ್ಯ ಮತ್ತು ಗೋಮಾಳ, ಗಣಂಗೂರು ಗ್ರಾಮದ ಸರ್ವೇ ನಂ.105 ಗೋಮಾಳ, ಸಿದ್ದಾಪುರ ಗ್ರಾಮದ ಸರ್ವೇ ನಂ.93 ಗೋಮಾಳ ಪ್ರದೇಶ, ಚೆನ್ನನಕೆರೆ ಸರ್ವೇ ನಂ.78 ಅರಣ್ಯ ಭೂಮಿ, ಹಂಗರಹಳ್ಳಿ ಗ್ರಾಮದ ಸರ್ವೇ ನಂ.185 ಮತ್ತು ಮುಂಡುಗದೊರೆ ಗ್ರಾಮದ ಸರ್ವೇ ನಂ.351 ಅರಣ್ಯ ಭೂಮಿಯಲ್ಲಿ ಪ್ರಭಾವಿ ಗಣಿ ಧಣಿಗಳು ಅಕ್ರಮ ಕ್ರಷರ್‌ಗಳ ನಿರ್ಮಿಸಿ ಇಂತಹ ಸರ್ಕಾರಿ ಭೂಮಿಯಲ್ಲಿ ಕಲ್ಲು ಕ್ವಾರೆ ಮಾಡಿ ಸರ್ಕಾರಕ್ಕೆ ರಾಜಧನ ಪಾವತಿಸದೆ ಕೋಟ್ಯಂತರ ರೂ. ಮೌಲ್ಯದ ನೈಸರ್ಗಿಕ ಸಂಪತ್ತನ್ನು ಬಗೆದು ಲೂಟಿ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದ ಪರಿಣಾಮ ಈ ಹಿಂದೆ ಇದ್ದ ತಹಸೀಲ್ದಾರ್, ವಲಯ ಅರಣ್ಯಾಧಿಕಾರಿ, ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಗಳ ಟಾಸ್ಕ್‌ಫೋರ್ಸ್ ನೇತೃತ್ವದಲ್ಲಿ ಜೂ.2ರಂದು ಅಕ್ರಮ ಚಟುವಟಿಕೆ ಬಂದ್ ಮಾಡಿಸಿ ನಿಷೇಧ ಹೇರಲಾಗಿತ್ತು.

ಆದರೆ ಈಗ ಮತ್ತೆ ಅಕ್ರಮವಾಗಿ ಕ್ರಷರ್‌ಗಳು ಮತ್ತು ಕಲ್ಲು ಕ್ವಾರೆಗಳು ಆರಂಭವಾಗಿದೆ. ಈ ಬಗ್ಗೆ ತಾಲೂಕು ಮತ್ತು ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಈ ನಿಲುವಿಗೆ ಹೋರಾಟ ಸಂಘಟನೆಗಳ ಮುಖಂಡರಾದ ಗಂಜಾಂ ರವಿಚಂದ್ರ, ಜಕ್ಕನಹಳ್ಳಿ ಬಾಲು ಹಾಗೂ ಮರವೇ ಶಂಕರ್ ಬಾಬು ಸಹ ದನಿಗೂಡಿಸಿದರು.

ಮನವಿ ಆಲಿಸಿದ ತಹಸೀಲ್ದಾರ್ ಶೀಘ್ರವೇ ಸಂಬಂಧಪಟ್ಟ ವ್ಯಾಪ್ತಿಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಖುದ್ದು ಸ್ಥಳಕ್ಕೆ ತೆರಳಿ ಅರಣ್ಯ ಮತ್ತು ಗೋಮಾಳ ವೀಕ್ಷಣೆ ಜತೆಗೆ ಆ ವ್ಯಾಪ್ತಿಯ ಕೆಲವರು ಕೃಷಿಗಾಗಿ ಪಡೆದಿರುವ ದಾಖಲೆಗಳ ಪರಿಶೀಲನೆ ಜತೆಗೆ ಕೃಷಿ ಅಲ್ಲದೆ ಅಕ್ರಮ ಚಟುವಟಿಕೆಗಳಿಗೆ ಭೂಮಿಯನ್ನು ಪರಿವರ್ತಿಸಿಕೊಂಡಿದ್ದರೆ ಅಂತಹ ಭೂಮಿಯನ್ನು ಸರ್ಕಾರಕ್ಕೆ ಹಿಂಪಡೆವ ಭರವಸೆ ನೀಡಿದರು.

ರೈತ ಮುಖಂಡರಾದ ಕೂಡಲಕುಪ್ಪೆ ನಾಗೇಂದ್ರಸ್ವಾಮಿ, ತಮ್ಮಣ್ಣ, ಕೋಡಿಶೆಟ್ಟಿಪುರ ತೇಜಸ್, ಕಾಳೇನಹಳ್ಳಿ ಮಹೇಶ್, ನೀಲನಕೊಪ್ಪಲು ಕಾಂತರಾಜು, ಆರತಿ ಉಕ್ಕಡ ಕಾಂತ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net