ಸ್ಥಳೀಯ ವ್ಯವಸ್ಥೆಗೆ ಅನುಕೂಲವಾಗುವಂತೆ ಕಾಮಗಾರಿ : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೂಚನೆ

New Project (13)
Published on

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯನ್ನು ಸ್ಥಳೀಯ ವ್ಯವಸ್ಥೆಗೆ ಅನುಕೂಲವಾಗುವಂತೆ ನಡೆಸಬೇಕು ಹಾಗೂ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯಕ್ಕೆ ಹೆದ್ದಾರಿಯಿಂದ ಕಲ್ಪಿಸಲಾದ ಸಂಪರ್ಕ ರಸ್ತೆಯನ್ನು ಉಳಿಸಿಕೊಳ್ಳಬೇಕೆಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೂಚನೆ ನೀಡಿದರು.

ಶನಿವಾರ ಉಪ್ಪಿನಂಗಡಿಯ ಪರಿಸರದಲ್ಲಿ ಹೆದ್ದಾರಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಮಾತನಾಡಿ, ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಸಮೀಪದಲ್ಲಿರುವ ಬ್ರಿಟಿಷರ ಕಾಲದ ಕುಮಾರಧಾರಾ ಸೇತುವೆಯ ಧಾರಣಾ ಸಾಮರ್ಥ್ಯ ಕುಸಿದಿರುವ ಕಾರಣ ದೊಡ್ಡ ವಾಹನಗಳ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಬೇಕು. ಸೇತುವೆಯ ಬಳಿಯಲ್ಲಿನ ಸ್ಥಳವನ್ನು ದೇವಾಲಯಕ್ಕೆ ಆಗಮಿಸುವ ಮಂದಿಯ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಯೋಜನಾಬದ್ಧವಾಗಿ ಬಳಸಬೇಕೆಂದು ತಿಳಿಸಿದರು.

ಗಾಂಧಿ ಪಾರ್ಕ್ ಬಳಿ ಹೆದ್ದಾರಿ ಕಾಮಗಾರಿಯ ಸಲುವಾಗಿ ಕಡಿಯಲಾದ ಸ್ಥಳದ ಸುರಕ್ಷತೆಗಾಗಿ ಕೋಟೆ ರಸ್ತೆಗೆ ತಡೆಗೋಡೆ ನಿರ್ಮಿಸಲು, ಹೆದ್ದಾರಿ ಕಾಮಗಾರಿಯನ್ನು ನಿಗದಿ ಅವಧಿಯೊಳಗೆ ಪೂರ್ಣಗೊಳಿಸಲು ಸೂಚಿಸಿದರು.

ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯಿರುವ ನೇತ್ರಾವತಿ ನದಿ ಸೇತುವೆಯಿಂದ ರಾಷ್ಟ್ರೀಯ ಹೆದ್ದಾರಿವರೆಗಿನ ಪಿಡಬ್ಲುೃಡಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಿ, ನಾಲ್ಕು ರಸ್ತೆ ಸೇರುವಲ್ಲಿ ಆಕರ್ಷಕ ವೃತ್ತವನ್ನು ನಿರ್ಮಿಸಿ ನಗರ ಸೌಂದರ್ಯ ಹೆಚ್ಚಿಸಲು ಯೋಜನೆ ರೂಪಿಸಲಾಗುವುದು. ಯುಜಿಡಿ ಸಹಿತ ಒಳಚರಂಡಿ ವ್ಯವಸ್ಥೆಗೆ ಒಂದೊಂದು ಗ್ರಾ.ಪಂ.ಗೂ ಐದು ಕೋಟಿ ರೂ. ಅನುದಾನ ಲಭಿಸಲಿರುವುದರಿಂದ ಉಪ್ಪಿನಂಗಡಿ ಗ್ರಾ.ಪಂ.ನವರಲ್ಲಿ ಒಳಚರಂಡಿ ವ್ಯವಸ್ಥೆಗಾಗಿ 5 ಲಕ್ಷ ಕಟ್ಟಿ ಯುಜಿಡಿ ಮಾಡಿಸಿದರೆ ನದಿಗೆ ಕಲುಷಿತ ನೀರು ನೇರವಾಗಿ ಸೇರುವುದನ್ನು ತಡೆಗಟ್ಟಬಹುದೆಂದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ನವೀನ್, ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯ ರಘುನಾಥ ರೆಡ್ಡಿ , ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನೈಾಕ್, ಸದಸ್ಯರಾದ ಸೋಮನಾಥ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್, ಪುತ್ತೂರು ಬ್ಲಾಕ್ ಕೃಷ್ಣ ಪ್ರಸಾದ್ ಆಳ್ವ , ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ.ಮತ್ತು ಮುರಳೀಧರ ರೈ, ಪ್ರಮುಖರಾದ ಶಬೀರ್ ಕೆಂ.ಪಿ, ಇರ್ಷಾದ್ ಯು. ಟಿ., ಯೂನಿಕ್ ರಹಿಮಾನ್, ಪ್ರಶಾಂತ್ ಡಿಕೋಸ್ಟಾ, ಜಯಪ್ರಕಾಶ್ ಬದಿನಾರ್, ಸುದೇಶ್ ಶೆಟ್ಟಿ, ವೆಂಕಟೇಶ್ ರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net