

ವಿಜಯವಾಣಿ ಸುದ್ದಿಜಾಲ ಕಡಬ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಗ್ರಾ.ಪಂ.ಗಳ ಪಾತ್ರ ಮಹತ್ವದ್ದು. ಪ್ರತಿ ವರ್ಷ ಅನೇಕ ಯೋಜನೆಗಳು ಸೇರಿಕೊಳ್ಳುತ್ತಿದ್ದರೂ ಕರ್ತವ್ಯದಲ್ಲಿ ನಿರ್ಲಕ್ಷೃ ತೋರದೆ ಪ್ರತಿ ವಿಷಯಗಳಲ್ಲಿ ಪ್ರಗತಿ ಸಾಧಿಸಬೇಕು ಎಂದು ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಹೇಳಿದರು.
ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನರೇಗಾ ಯೋಜನೆಯಡಿ ಕಳೆದ ಆರ್ಥಿಕ ವರ್ಷದಲ್ಲಿ ಗುರಿ ಮೀರಿದ ಸಾಧನೆ ಮಾಡಿದ್ದಕ್ಕೆ ತಾಪಂ ಹಾಗೂ ಗ್ರಾಪಂಗಳಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಅದೇ ರೀತಿ ಈ ಬಾರಿಯೂ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಬೇಕು. ಗ್ರಾ.ಪಂ.ಗಳ ತೆರಿಗೆ ವಸೂಲಾತಿಯಲ್ಲಿ ಮೊದಲ ತ್ರೈಮಾಸಿಕದಲ್ಲಿ ಶೇ.31 ಪ್ರಗತಿ ಸಾಧಿಸುವ ಮೂಲಕ ಕಡಬ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದೇ ರೀತಿ ಮುಂದುವರಿಯಬೇಕು ಎಂದರು.
ಕಡಬ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಪಂಚತಂತ್ರ 2.0ರಲ್ಲಿ ನಮೂದಿಸಬೇಕಾದ ಅಗತ್ಯ ವಿಷಯಗಳ ಬಗ್ಗೆ ಪ್ರಗತಿ ಪರಿಶೀಲಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತ ಸುರೇಶ್, ಮನೆ-ಮನೆ ಗಂಗೆ ಯೋಜನೆಯಡಿ ಗ್ರಾಪಂಗಳು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮ ಕುರಿತು ವಿವರಿಸಿದರು.
ಕಡಬ ತಾಪಂ ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ಯಶವಂತ ಬೆಳ್ಚಡ ಸ್ವಾಗತಿಸಿದರು. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂದೇಶ್ ಕೆ.ಎನ್. ವಂದಿಸಿದರು. ತಾಪಂ ವ್ಯವಸ್ಥಾಪಕ ಭುವನೇಂದ್ರ ಕುಮಾರ್ ಹಾಗೂ ನರೇಗಾ ಸಂಯೋಜಕ ಭರತ್‌ರಾಜ್ ಕಾರ್ಯಕ್ರಮ ನಿರ್ವಹಿಸಿದರು.
ನರೇಗಾ ಸಾಧಕರಿಗೆ ಅಭಿನಂದನೆ
2024-25ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ತೆರಿಗೆ ವಸೂಲಾತಿಯಲ್ಲಿ ಸಾಧನೆಗೈದ ಬೆಳಂದೂರು, ಸವಣೂರು, ಆಲಂಕಾರು, ಕುಟ್ರುಪಾಡಿ, ಕೊಣಾಜೆ, ಸುಬ್ರಹ್ಮಣ್ಯ, ಬಿಳಿನೆಲೆ, ಗೋಳಿತೊಟ್ಟು, ಶಿರಾಡಿ, ನೂಜಿಬಾಳ್ತಿಲ, ಕೊಂಬಾರು, ಕೊಯಿಲ, ಬಳ್ಪ, ಪೆರಾಬೆ, ಕಾಣಿಯೂರು ಗ್ರಾಪಂಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿ, ನರೇಗಾ ತಾಂತ್ರಿಕ ಸಹಾಯಕರನ್ನು ಅಭಿನಂದಿಸಲಾಯಿತು.