ಯುವತಿ ಮಾನಭಂಗಕ್ಕೆ ಯತ್ನ : ಆರೋಪಿಗಳಿಬ್ಬರ ಬಂಧನ

ra
Published on

ಕಾಸರಗೋಡು: ಉದುಮ ಕಾಪ್ಪಿಲ್‌ನ ಹೋಮ್‌ಸ್ಟೇ ಒಂದರಲ್ಲಿ ಯುವತಿಯನ್ನು ಬೆದರಿಸಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಪ್ರಕರಣದ ಆರೋಪಿ ಒಳಗೊಂಡಂತೆ ಇಬ್ಬರನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾರ ಏರೋಲ್ ಕುನ್ನುಮ್ಮಲ್ ನಿವಾಸಿ ಮಹಮ್ಮದ್ ಇರ್ಫಾನ್, ಏರೋಲ್ ನಿವಾಸಿ ಎನ್.ಎಸ್.ಅಬ್ದುಲ್ಲ ಬಂಧಿತರು. ಉದ್ಯೋಗ ಸಂಬಂಧಿ ಕೆಲಸಗಳಿಗಾಗಿ ದಕ್ಷಿಣ ಕೇರಳದಿಂದ ಆಗಮಿಸಿದ್ದ ಯುವತಿಯೊಬ್ಬಳ ದೂರಿನ ಮೇರೆಗೆ ಬಂಧಿಸಲಾಗಿತ್ತು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಯುವತಿ ವಾಸ್ತವ್ಯ ಹೂಡಿದ್ದ ಹೋಮ್‌ಸ್ಟೇ ಕೊಠಡಿಗೆ ಆಗಮಿಸಿದ ತಂಡ ಬಾಗಿಲು ಬಡಿದು, ಅಶ್ಲೀಲವಾಗಿ ಬೈದು ದಾಂಧಲೆ ನಡೆಸಿದ್ದರು. ಈ ಬಗ್ಗೆ ಯುವತಿ ರಿಸೆಪ್ಶನಿಸ್ಟ್‌ಗೆ ಕರೆ ಮಾಡಿ ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದರು. 2015ರ ಮೇ 12ರಂದು ಉದುಮ ಕಣ್ಣಂಗುಳದಲ್ಲಿ ಶಾಹುಲ್ ಹಮೀದ್ ಎಂಬುವರಿಗೆ ಇರಿದು ಕೊಲೆಗೈದ, ಸಹೋದರನಿಗೆ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಮಹಮ್ಮದ್ ಇರ್ಷಾದ್ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net