

ತನಗಿರುವ ಕಡಿಮೆ ಭೂಮಿಯಲ್ಲೇ ಮಿಶ್ರ ಬೇಸಾಯ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಡಿ ವಿವಿಧ ಬೆಳೆ ಬೆಳೆಯುವ ಮೂಲಕ ಕೃಷಿಯಲ್ಲಿ ಯಶಸ್ಸು ಸಾಧಿಸುತ್ತಿರುವ ಜತೆಗೆ ಇತರರಿಗೂ ಮಾದರಿಯಾಗಿದೆ ಕೈಲಾಂಚ ಹೋಬಳಿಯ ಕೆರೆಮೇಗಳದೊಡ್ಡಿಯ ಯುವ ರೈತ ಅನಂತು ಅವರ ಕೃಷಿ ಪಯಣ.
ಮೂರುವರೆ ಎಕರೆ ಜಮೀನಿನಲ್ಲಿ ಹತ್ತಾರು ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕುರಿ ಸಾಕಣೆ ಜತೆಗೆ ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಹೊಸ ಬೆಳೆಗಳತ್ತ ಚಿತ್ತ ಹರಿಸಿದ್ದು, ಕೃಷಿಯನ್ನು ಲಾಭದಾಯಕವನ್ನಾಗಿಸಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ವಿಶೇಷವಾಗಿ ಈ ಭಾಗದಲ್ಲಿ ಇತ್ತೀಚೆಗೆ ರೈತರು ಅಪರೂಪವಾಗಿ ಬೆಳೆಯುತ್ತಿರುವ ಬೆಣ್ಣೆ ಹಣ್ಣು (ಬಟರ್ ಫ್ರೂಟ್) ಕಿತ್ತಳೆ,
ಸರ್ವಋತು ನಿಂಬೆ ಇವರ ಭೂಮಿಯಲ್ಲಿದೆ. ಬಟರ್‌ಫ್ರೂಟ್ ಕೃಷಿ ಅಪರೂಪವಾಗಿದ್ದು, ಜಿಲ್ಲೆಯಲ್ಲಿ ಬೆರಳಣಿಕೆ ರೈತರು ಈಗೀಗ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಕೃಷಿ ಪದ್ಧತಿಯಲ್ಲಿ ಇಂತಹ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ. ಆ ಸಾಲಿನಲ್ಲಿ ಅನಂತು ಕೂಡ ಒಬ್ಬರಾಗಿದ್ದು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯಿಂದ ಸಿಗುವ ಸವಲತ್ತುಗಳ ಜತೆಗೆ ನರೇಗಾ ಯೋಜನೆ ಮೂಲಕ ಕೃಷಿ ಚಟುವಟಿಕೆಯಲ್ಲಿ ಮುಂದಡಿ ಇಟ್ಟಿದ್ದಾರೆ.
ಭೂಮಿಯ ಫಲವತ್ತತೆಗೆ ಒತ್ತು ನೀಡಿರುವ ಅನಂತು ತಮ್ಮ ಜಮೀನಿನಲ್ಲೇ ತೊಟ್ಟಿ ನಿರ್ಮಿಸಿ, ತೋಟದಲ್ಲಿ ಸಿಗುವ ಒಣಗಿದ ಎಲೆ, ಕೊಟ್ಟಿಗೆ ಗೊಬ್ಬರ, ಮಣ್ಣು ಸೇರಿಸಿ ಎರೆಹುಳು ಸಾಕಣೆ ಮಾಡಿ ಭೂಮಿಗೆ ಗೊಬ್ಬರ ನೀಡುತ್ತಿದ್ದಾರೆ. ಇದರಿಂದ ಹೆಚ್ಚಿನ ರಾಸಾಯನಿಕ ಗೊಬ್ಬರ, ಔಷಧ ಬಳಕೆ ಪ್ರಮಾಣ ತಗ್ಗಿದೆ ಎನ್ನುತ್ತಾರೆ ಅನಂತು. ನೀರಾವರಿಗೆ ಎರಡು ಬೋರ್‌ವೆಲ್ ಇದ್ದು, ಸಮ ಪ್ರಮಾಣದಲ್ಲಿ ನೀರು ದೊರಕುವಂತೆ ವೈಜ್ಞಾನಿಕ ರೀತಿಯಲ್ಲಿ ಪಪ್ಪಾಯ ತೋಟ ನಿರ್ವಹಣೆ ಮಾಡಿ ಅದರ ಮಧ್ಯೆದಲ್ಲೇ ಬಟರ್ ್ರೂಟ್, ನಿಂಬೆ, ಕಿತ್ತಳೆ ಗಿಡಗಳನ್ನು ನೆಟ್ಟಿದ್ದಾರೆ. ಒಂದೇ ಕೃಷಿ ಖರ್ಚಿನಲ್ಲಿ ಹಲವು ಫಸಲು ತೆಗೆದು ಲಾಭಗಳಿಸುವ ಗುರಿ ಇವರದ್ದಾಗಿದೆ.
ಕಡಿಮೆ ಅವಧಿಯಲ್ಲಿ ಹೆಚ್ಚಿನ ಫಸಲು ನೀಡುವ ತೆಂಗು, ಅದರ ಮಧ್ಯೆ ಜಾನುವಾರು ಮೇವು, ರೇಷ್ಮೆ ಕೃಷಿ, ಮಾವು, ಜತೆಗೆ ಉಳಿದ ಪ್ರದೇಶದಲ್ಲಿ ಭತ್ತ, ರೇಷ್ಮೆ ಕೃಷಿ ಮಾಡುತ್ತಾರೆ. ಜತೆಗೆ ಹೈನುಗಾರಿಕೆ, ಕುರಿ, ಮೇಕೆ ಸಾಕಣೆ ಕೂಡ ಇವರ ಉಪ ಕಸುಬಾಗಿದೆ. ತಾವು ಬೆಳೆಯುವ ಬೆಳೆಗೆ ಹೆಚ್ಚಾಗಿ ರಸಗೊಬ್ಬರ ನೀಡದೆ ಕೊಟ್ಟಿಗೆ ಗೊಬ್ಬರ ನೀಡಿ ಸಾವಯವ ಕೃಷಿಯತ್ತಲೂ ಚಿತ್ತಹರಿಸಿದ್ದಾರೆ ಅನಂತು.
ವಿಶೇಷವಾಗಿ ಕುರಿ, ಟಗರು, ಮೇಕೆ ಸಾಕಣೆ ಪ್ರವೃತ್ತಿಯನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದು, ಪ್ರತಿವರ್ಷ ಹೆಚ್ಚಿನ ಬೆಲೆಗೆ ಟಗರು ಮಾರಾಟ ಮಾಡಿ ಅದರಿಂದಲೂ ಲಾಭದತ್ತ ಹೆಜ್ಜೆ ಇಟ್ಟಿದ್ದಾರೆ. ಕಳೆದ ವರ್ಷ ಒಂದು ಜತೆ ಟಗರು 90 ಸಾವಿರಕ್ಕೆ ಮಾರಾಟವಾಗಿದ್ದು, ಪ್ರಸ್ತುತ 6 ಟಗರು, 4 ಮೇಕೆಗಳನ್ನು ಸಾಕುತ್ತಿದ್ದಾರೆ.
ಕೃಷಿ ಕಾರ್ಯಕ್ಕೆ ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಪವರ್ ವೀಡರ್ ಖರೀದಿ ಮಾಡಿ, ಹೈನುಗಾರಿಕೆಗೆ ಬಳಸುವ ಮೇವು ಕಟಾವು ಯಂತ್ರ ಇತರ ಕೃಷಿ ಚಟುವಟಿಕೆ ಯಂತ್ರಗಳ ಮೂಲಕ ಕೃಷಿ ಕೆಲಸಗಳಿಗೆ ಒತ್ತು ನೀಡಿದ್ದಾರೆ. ಕೃಷಿ ಯಂತ್ರಗಳ ಚಾಲನೆ ಕೂಡ ಅನಂತು ಸರಾಗವಾಗಿ ನಿಭಾಯಿಸುತ್ತಾರೆ.
ರಾಗಿ, ಮಾವು 1 ಎಕರೆ, 30 ಗುಂಟೆಯಲ್ಲಿ ರೇಷ್ಮೆ, ಜಾನುವಾರು ಮೇವು, ಜೋಳ, 2 ಎಕರೆ ಪ್ರದೇಶದಲ್ಲಿ 110 ತೆಂಗು, 700 ಪಪ್ಪಾಯ, ಸಮಗ್ರ ಕೃಷಿಯಾಗಿ 180 ಬಟರ್ ್ರೂಟ್, 60 ನಿಂಬೆ, 50 ಕಿತ್ತಳೆ ಗಿಡಗಳಿವೆ. ಆನೆ ಕಾಟದಿಂದ ಬಾಳೆ ಬೆಳೆ ನಿಲ್ಲಿಸಲಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಬೆಳೆದಿದ್ದ ಏಲಕ್ಕಿ ಬಾಳೆ ಗೊನೆ 32 ಕೆ.ಜಿ. ಬಂದಿದ್ದು ಜಿಲ್ಲೆಯಲ್ಲಿಯೇ ಹೆಚ್ಚು ತೂಕದ ಗೊನೆ ಕಂಡಿತ್ತು ಎನ್ನುತ್ತಾರೆ ಕೃಷಿಕ ಅನಂತು.
* ಬೆಣ್ಣೆಹಣ್ಣು
* ಕಿತ್ತಳೆ
* ನಿಂಬೆ
* ತೆಂಗು, ಬಾಳೆ
* ರಾಗಿ, ಜೋಳ
* ಪಪ್ಪಾಯಿ
* ಜಾನುವಾರು ಮೇವು
* ರೇಷ್ಮೆ
* ಮಾವು
* ಹೈನುಗಾರಿಕೆ
* ಎರೆಹುಳಿ ಸಾಕಣೆ
* ಕುರಿ, ಮೇಕೆ, ಟಗರು ಸಾಕಣೆ