ಲಾಭ ಪಡೆದವರಿಂದಲೇ ಮಠ ಕ್ಕೆ ದ್ರೋಹ: ಮಾಜಿ ಶಾಸಕ ಶಿವಶಂಕರ್ ಆಕ್ರೋಶ

Profit, Mutt, Betrayal, Ex-MLA,
Published on

ಚಿತ್ರದುರ್ಗ: ಮುರುಘಾ ಮಠದಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂಬ ಸನ್ನಿವೇಶದಲ್ಲಿ ಸ್ಥಿತ್ಯಂತರಗಳಾಗಿದ್ದು ಭಕ್ತರಲ್ಲಿ ಬಹಳಷ್ಟು ನೋವುಂಟು ಮಾಡಿದೆ ಎಂದು ಹರಿಹರದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹೇಳಿದರು.

ಮುರುಘಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಭಕ್ತರ ಹಾಗೂ ವಿವಿಧ ಸಮಾಜಗಳ ಮುಖಂಡರ ಸಭೆಯಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಮಠದ ಆಡಳಿತಾಧಿಕಾರಿಯಾಗಿ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕಾರ್ಯದರ್ಶಿಯನ್ನಾಗಿ ನೇಮಕದ ಬಳಿಕ ಮಾತನಾಡಿದರು.

ಸಾವಿರಾರು ಕೋಟಿ ರೂ. ಆಸ್ತಿ, ಲಕ್ಷಾಂತರ ಭಕ್ತರಿರುವ ಮಠದಿಂದ ಅನುಕೂಲ ಮಾಡಿಕೊಂಡವರು ಸರ್ಕಾರದ ಮೇಲೆ ಒತ್ತಡ ಹಾಕಿ ಆಡಳಿತಾಧಿಕಾರಿಯ ನೇಮಕ ಮಾಡಿಸಿದರು.

ಆ ಮೂಲಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದರು. ಇದಕ್ಕೆ ಕೋರ್ಟ್ ತಡೆ ಹಾಕಿದೆ.

ಶರಣರು ಬರುವವರೆಗೆ ಬಸವಪ್ರಭು ಸ್ವಾಮೀಜಿ ಅವರು ವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಹೋಗಲಿದ್ದಾರೆ ಎಂದು ಹೇಳಿದರು.

ಐತಿಹಾಸಿಕ ತೀರ್ಪಿನಿಂದ ಮಠಗಳಿಗೆ ಅನುಕೂಲ

ಸಲಹಾ ಸಮಿತಿ ಸದಸ್ಯ ಜಿತೇಂದ್ರ ಹುಲಿಕುಂಟೆ ಮಾತನಾಡಿ, ಹೈಕೋರ್ಟ್‌ನ ಈ ಐತಿಹಾಸಿಕ ತೀರ್ಪಿನಿಂದ ನೂರಾರು ಮಠಗಳಿಗೆ ಅನುಕೂಲವಾಗಿದೆ.

ಬಸವಪ್ರಭು ಸ್ವಾಮೀಜಿ ಅವರಿಗೆ ಮಠದ ಉಸ್ತುವಾರಿ ವಹಿಸಿರುವ ಮುರುಘಾ ಶರಣರು ಪೀಠದ ಶಾಶ್ವತ ಅಧ್ಯಕ್ಷರಾಗಿದ್ದಾರೆ ಎಂದರು.

ವಕೀಲರಾದ ವಿಶ್ವನಾಥಯ್ಯ, ಉಮೇಶ್, ವಿಶ್ವನಾಥ್, ಜಿಪಂ ಮಾಜಿ ಉಪಾಧ್ಯಕ್ಷ ಎಸ್‌ಎಂಎಲ್ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ದಾವಣಗೆರೆ, ಸಿಂದಗಿ, ಹಾವೇರಿ, ತುಮಕೂರು, ಬೀದರ್ ಮತ್ತಿತರ ಜಿಲ್ಲೆಗಳ ಭಕ್ತರು, ಎಸ್‌ಜೆಎಂ ವಿದ್ಯಾಪೀಠದ ನೌಕರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net