

ಮದ್ದೂರು: ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಕೊಪ್ಪ ಹೋಬಳಿಯ ಗೊಲ್ಲರದೊಡ್ಡಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಭಾನುವಾರ ಮಣ್ಣಿನಲ್ಲಿ ಮಳೆರಾಯನ ಮೂರ್ತಿ ನಿರ್ಮಿಸಿ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಳೆರಾಯನ ಮೂರ್ತಿ ಹೊತ್ತ ಯುವಕರು ಮೆರವಣಿಗೆ ನಡೆಸಿದರು.
ಮೂರು ದಿನ ನಡೆಯುವ ಪೂಜೆ, ಮೆರವಣಿಗೆ ಸೋಮವಾರವೂ ನಡೆಯಿತು. ಪ್ರತಿ ಮನೆಯ ಮುಂದೆ ಮೆರವಣಿಗೆ ತೆರಳಿದಾಗ ಮಹಿಳೆಯರು ಮಳೆರಾಯನನ್ನು ಆತ್ಮೀಯವಾಗಿ ಬರಮಾಡಿಕೊಂಡು ಒಂದು ಬಿಂದಿಗೆಯಲ್ಲಿ ನೀರನ್ನು ಹಾಕಿ, ಪೂಜೆ ಸಲ್ಲಿಸಿದರು.
ಯುವಕರ ತಂಡ ಮತ್ತು ಗ್ರಾಮಸ್ಥರು ಈ ವೇಳೆ ಮಳೆರಾಯ ನೀ ಬಾರದ ಹಿನ್ನೆಲೆಯಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳಗಳು ಒಣಗುತ್ತಿವೆ. ಕೆರೆ-ಕಟ್ಟೆ, ನಾಲೆಗಳಲ್ಲಿ ನೀರಿಲ್ಲದೆ ಜಾನುವಾರುಗಳು ಹನಿ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನೀನು ಭೂಮಿಗೆ ಬಾರದೆ ಇದ್ದರೆ ದೇವರೇ ಗತಿ ಎಂದು ಪ್ರಾರ್ಥನೆ ಮಾಡಿದರು.
ಸೋಮವಾರ ರಾತ್ರಿ 9 ಗಂಟೆಯಿಂದ 9.30 ವರೆಗೆ ಮಳೆರಾಯನಿಗಾಗಿ ಪ್ರಾರ್ಥಿಸಿ ಮೆರವಣಿಗೆ ಮಾಡಿದ 10 ನಿಮಿಷಗಳ ನಂತರ ಕಾಕತಾಳೀಯ ಎಂಬಂತೆ ಮಳೆ ಬಂದು ಭೂಮಿಗೆ ತಂಪೆರೆಯಿತು. ಮುಂದಿನ ದಿನಗಳಲ್ಲೂ ನಿರಂತರವಾಗಿ ಮಳೆ ಬರಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದರು.
ಮೂರು ದಿನ ಮಳೆರಾಯನನ್ನು ಪ್ರಾರ್ಥಿಸಿದ ನಂತರ ಮಂಗಳವಾರ ಗ್ರಾಮದ ಮನೆಗಳಲ್ಲಿ ಅಕ್ಕಿ, ಖಾರದಪುಡಿ, ಹುಣಸೇಹಣ್ಣು ಸೇರಿದಂತೆ ಇತರ ಅಡುಗೆ ಸಾಮಗ್ರಿಗಳನ್ನು ಸಂಗ್ರಹಿಸಿ ಅದ್ದೂರಿಯಾಗಿ ಅನ್ನಸಂತರ್ಪಣೆ ಮಾಡಿ ಮಳೆಗಾಗಿ ಮತ್ತೊಮ್ಮೆ ವಿಶೇಷ ಪ್ರಾರ್ಥನೆ ಮಾಡಲಾಗುತ್ತದೆ.