ಖರೀದಿ ಆರಂಭಿಸದೆ ಸಮಸ್ಯೆ

ಖರೀದಿ ಆರಂಭಿಸದೆ ಸಮಸ್ಯೆ
Published on

ಸಿ.ಜಿ ಪುನೀತ್ ಚಪ್ಪರದಹಳ್ಳಿ
ಬೆಟ್ಟದಪುರ: ಬೆಂಬಲ ಬೆಲೆ ಯೋಜನೆಯಡಿ ಡಿಸೆಂಬರ್, ಜನವರಿ ತಿಂಗಳಲ್ಲಿ ಪ್ರಾರಂಭವಾಗುತ್ತಿದ್ದ ರಾಗಿ ಖರೀದಿ ಕೇಂದ್ರಗಳು ಈ ಬಾರಿ ಮಾರ್ಚ್ ಬಂದರೂ ಖರೀದಿ ಪ್ರಕ್ರಿಯೆ ಆರಂಭಿಸದೆ ರೈತರು ಸಮಸ್ಯೆಗೆ ಸಿಲುಕುವಂತಾಗಿದೆ.

ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ರಾಗಿ ಕಟಾವು ಪೂರ್ಣಗೊಂಡಿದ್ದು, ರೈತರು ಫಸಲು ಮಾರಾಟಕ್ಕೆ ಶೇಖರಣೆ ಮಾಡಿಟ್ಟುಕೊಂಡಿದ್ದಾರೆ. ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗದೆ ಸಮಸ್ಯೆ ಉದ್ಭವಿಸಿದೆ.

ಕಳೆದ ಬಾರಿ ಜನವರಿ ಅಂತ್ಯಕ್ಕೆ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ ಅಂತ್ಯದವರೆಗೂ ಖರೀದಿ ನಡೆದಿತ್ತು. ಪಿರಿಯಾಪಟ್ಟಣ ಹಾಗೂ ಬೆಟ್ಟದಪುರದಲ್ಲಿ ಖರೀದಿ ಕೇಂದ್ರ ತೆರೆದು ರೈತರಿಂದ ರಾಗಿ ಖರೀದಿಸಲಾಗಿತ್ತು. ಬೆಟ್ಟದಪುರ ವ್ಯಾಪ್ತಿಗೆ ಹೆಚ್ಚು ಗ್ರಾಮಗಳು ಬರುವುದರಿಂದ ಇಲ್ಲಿ ಹೆಚ್ಚು ವಹಿವಾಟು ನಡೆದಿತ್ತು.
ರೈತರ ಅನುಕೂಲಕ್ಕಾಗಿ ಈ ಬಾರಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಮೂರು ಖರೀದಿ ಕೇಂದ್ರಗಳನ್ನು ತೆರೆದಿದ್ದು, ಪಿರಿಯಾಪಟ್ಟಣ, ಬೆಟ್ಟದಪುರ ಜತೆಗೆ ಹೊಸದಾಗಿ ರಾವಂದೂರಿನಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಆದರೆ, ಖರೀದಿ ಪ್ರಕ್ರಿಯೆ ಪ್ರಾರಂಭವಾಗಿಲ್ಲ.

ಪೂರ್ಣಗೊಂಡ ನೋಂದಣಿ ಪ್ರಕ್ರಿಯೆ
ಕಳೆದ ವರ್ಷ ರೈತರು ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಸಿಕೊಳ್ಳಲು ಸರ್ವರ್, ಇನ್ನಿತರ ಸಮಸ್ಯೆಗಳು ಉದ್ಭವಿಸಿದ್ದವು. ಆದರೆ, ಈ ಬಾರಿ ನೋಂದಣಿಗೆ ಸರ್ಕಾರ ರೈತರ ಬಯೋಮೆಟ್ರಿಕ್ ಕಡ್ಡಾಯ ಮಾಡಿ ಹೊಸ ನಿಯಮ ಜಾರಿಗೆ ತಂದರೂ ಕೂಡ ಯಾವುದೇ ಸಮಸ್ಯೆಗಳು ಉದ್ಭವಿಸಿಲ್ಲ. ನಿರೀಕ್ಷೆಯಂತೆ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಪಿರಿಯಾಪಟ್ಟಣ ಖರೀದಿ ಕೇಂದ್ರದಲ್ಲಿ 4125, ಬೆಟ್ಟದಪುರ ಕೇಂದ್ರದಲ್ಲಿ 7357, ರಾವಂದೂರು ಕೇಂದ್ರದಲ್ಲಿ 2512 ರೈತರು ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಮೂರು ಖರೀದಿ ಕೇಂದ್ರದಿಂದ ಒಟ್ಟಾರೆ ಈ ಬಾರಿ 3,41,349 ಕ್ವಿಂಟಾಲ್ ರಾಗಿ ಮಾರಾಟಕ್ಕೆ ನೋಂದಣಿಯಾಗಿದೆ.

ಬಂಪರ್ ಬೆಲೆ
ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಈ ಬಾರಿ ಪ್ರತಿ ಕ್ವಿಂಟಾಲ್ ರಾಗಿಗೆ 3,846 ರೂಪಾಯಿ ನಿಗದಿಗೊಳಿಸಿದೆ. ಕಳೆದ ಬಾರಿ ಕ್ವಿಂಟಾಲ್‌ಗೆ 3578 ರೂ. ನಂತೆ ಖರೀದಿ ಮಾಡಲಾಗಿತ್ತು. ರಾಗಿಯೊಂದಿಗೆ ಭತ್ತವನ್ನು ಕೂಡ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲಾಗುತ್ತಿದ್ದು, ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್ ಗೆ 2183 ರೂ. ಹಾಗೂ ಗ್ರೇಡ್ ಎ ಭತ್ತಕ್ಕೆ ಕ್ವಿಂಟಾಲ್‌ಗೆ 2203 ರೂ. ದರ ನಿಗದಿಪಡಿಸಿದೆ. ಮುಕ್ತ ಮಾರುಕಟ್ಟೆಯಲ್ಲಿಯೇ ರಾಗಿಗೆ ಒಳ್ಳೆಯ ಬೆಲೆ ದೊರಕುತ್ತಿದ್ದು, ರೈತರು ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ತುರ್ತು ಹಣದ ಅವಶ್ಯಕತೆ ಇರುವವರು ರಾಗಿ ಫಸಲನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಉಳಿದಂತೆ ಖರೀದಿ ಕೇಂದ್ರ ತೆರೆಯುವುದನ್ನೇ ಎದುರು ನೋಡುತ್ತಿದ್ದಾರೆ.

ಮಳೆಯ ಆತಂಕ

ಪ್ರತಿ ವರ್ಷ ರೈತರು ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಸಿಕೊಂಡ ಬಳಿಕ ಖರೀದಿ ಕೇಂದ್ರಗಳು ಖರೀದಿ ಪ್ರಕ್ರಿಯೆ ನಡೆಸುತ್ತಿದ್ದವು, ಕಳೆದ ಬಾರಿ ಕೂಡ ಜನವರಿ ತಿಂಗಳಿನಿಂದಲೇ ಖರೀದಿ ಪ್ರಕ್ರಿಯೆ ಆರಂಭಿಸಿ ಇಷ್ಟರಲ್ಲಾಗಲೇ ಮುಗಿಯುವ ಹಂತಕ್ಕೆ ತಲುಪಿತ್ತು. ಆದರೆ, ಈ ಬಾರಿ ಇನ್ನೂ ಖರೀದಿ ಆರಂಭಿಸದಿರುವುದು ರೈತರಲ್ಲಿ ಆತಂಕ ಮನೆ ಮಾಡಿದೆ. ಮುಂಬರುವ ದಿನಗಳಲ್ಲಿ ಮಳೆ ಆರಂಭವಾದರೆ ಏನು ಮಾಡುವುದು ಎಂಬ ಆತಂಕ ರೈತರಲ್ಲಿ ಮನೆಮಾಡಿದೆ. ಸರ್ಕಾರ ಆದಷ್ಟು ಬೇಗ ಖರೀದಿ ಪ್ರಕ್ರಿಯೆ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net