

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಸುಜ್ಲಾನ್ ಎಸ್‌ಇಜಡ್ ಪ್ರದೇಶದಲ್ಲಿ ನೆಲೆಯೂರಿರುವ ಸುರಕ್ಷಾ ಗರ್ಡರ್‌ಗಳ ಉತ್ಪಾದನಾ ಕೈಗಾರಿಕಾ ಘಟಕದಿಂದ ಪರಿಸರ, ಶಬ್ದ ಹಾಗೂ ವಾಯುಮಾಲಿನ್ಯದ ವಿರುದ್ಧ ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ, ಸ್ಥಳೀಯರಾದ ಶ್ರೀನಾಥ್ ಹೆಗ್ಡೆ, ರವೀಂದ್ರ, ರಮೀಝ್ ಹುಸೈನ್, ಸುಧಾಕರ ಶೆಟ್ಟಿ, ವೆಂಕಟರಮಣ ಪೈ, ನರಸಿಂಹ ಮತ್ತಿತರರು ಘಟಕ ಮುಂದೆ ಶುಕ್ರವಾರ ಪ್ರತಿಭಟಿಸಿದರು.
ಮಾಲಿನ್ಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಘಟಕಕ್ಕೆ ಹಲವು ಬಾರಿ ಮೌಖಿಕ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ತಮ್ಮಿಂದ ಪರಿಸರ ಹಾನಿಕಾರಕ ಯಾವುದೇ ರಾಸಾಯನಿಕಗಳು ನೀರು ಹರಿವ ಚರಂಡಿ ಮೂಲಕ ಅಲ್ಲಿನ ಸಣ್ಣ ತೊರೆ ಸೇರುತ್ತಿಲ್ಲ ಎಂದು ಕಂಪನಿ ವಾದಿಸಿದೆ. ಆದರೂ ತೊರೆಯ ನೀರಲ್ಲಿ ಬೆಳ್ಳಿ ಬಣ್ಣದ ರಾಸಾಯನಿಕ ನೀರಿನ ಮೇಲ್ಪದರದಲ್ಲಿ ತೇಲುತ್ತಿರುವುದರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟಕ ಎದುರಿನ ರಸ್ತೆ ಡಾಂಬರೀಕರಣಗೊಳಿಸದಿರುವುದರಿಂದ ಪರಿಸರವಿಡೀ ಧೂಳಿನಿಂದ ಆವರಿಸಿದೆ. ಕರ್ಕಶ ಶಬ್ದಮಾಲಿನ್ಯ ಕಂಪನಿ ಕೆಲಸದ ವೇಳೆ ಕೆಲವೊಮ್ಮೆ ಸ್ಥಳೀಯರ ನಿದ್ದೆಗೆಡಿಸುತ್ತಿದೆ. ಸಂಜೆ ವೇಳೆ ಸಾಮಾನ್ಯವಾಗಿಯೇ ಕಣ್ಣು ಉರಿ ಸಹಿತ ದುರ್ವಾಸನೆ ಪರಿಸರದವರನ್ನು ಈಗಾಗಲೇ ಬೆಚ್ಚಿಬೀಳಿಸಿದೆ. ಆದರೂ ತಮ್ಮಲ್ಲಿ ಯಾವುದೇ ಪರಿಸರ ಸಮಸ್ಯೆಗಳಿಲ್ಲ ಎಂದು ಕಂಪನಿ ವಕ್ತಾರರು ಹೇಳುತ್ತಿದ್ದಾರೆ. ಹೊರಬರುವ ನೀರನ್ನು ಕೈತೊಳೆದ ನೀರು ಎನ್ನುತ್ತಿರುವ ಸಂಸ್ಥೆ ಅದನ್ನೇ ತನ್ನ ಎಸ್‌ಟಿಪಿ ಮೂಲಕ ಶುದ್ಧೀಕರಣಗೊಳಿಸಿ ಹಸಿರು ವೃದ್ಧಿಗೆ ಉಪಯೋಗಿಸುತ್ತಿಲ್ಲ ಯಾಕೆ ಎಂಬುದಾಗಿ ಸ್ಥಳೀಯರು ಪ್ರಶ್ನಿಸಿದ್ದಾರೆ.
ಸ್ಥಳೀಯರನ್ನು ಭೇಟಿ ಮಾಡಿದ ಕಂಪನಿ ವಕ್ತಾರರು ಮುಂದಿನ ಒಂದು ವಾರದೊಳಗಾಗಿ ನೀರಿನ ಸಮಸ್ಯೆ ನೀಗಿಸುವುದಾಗಿ ಭರವಸೆಯಿತ್ತಿದ್ದಾರೆ. ಘಟಕದ ಪರಿಸರ ಮಾಲಿನ್ಯದ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ.