ವಾಹನಗಳ ಸಂಚಾರಕ್ಕೆ ‘ಗುಂಡಿ’ ಅಡ್ಡಿ

oppo_2
oppo_2
Published on

ಹನೂರು: ಪಟ್ಟಣದಿಂದ ಲೊಕ್ಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಟ್ಟೆಹಳ್ಳ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ವಾಹನ ಸಂಚಾರಕ್ಕೆ ನೀಡಿದ್ದ ಜಮೀನಿನ ಜಾಗದಲ್ಲಿ ಶನಿವಾರ ಮಾಲೀಕ ಗುಂಡಿ ತೆಗೆಸಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ.

3 ವರ್ಷದ ಹಿಂದೆ ಲೋಕೋಪಯೋಗಿ ಇಲಾಖೆಯಿಂದ 1.5 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ವಾಹನಗಳು ಸಂಚರಿಸಲು ಬದಲಿ ಸ್ಥಳ ಇಲ್ಲದ ಪರಿಣಾಮ ಅಧಿಕಾರಿಗಳು ಸಮೀಪದಲ್ಲಿದ್ದ ಜಮೀನಿನ ಮಾಲೀಕ ಕುಮಾರ್ ಅವರನ್ನು ಭೇಟಿ ಮಾಡಿ ಕಾಮಗಾರಿಯನ್ನು 3 ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿ ವಾಹನಗಳ ಸಂಚಾರಕ್ಕೆ ಸ್ಥಳವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು. ಹಾಗಾಗಿ ಕುಮಾರ್ ಜಮೀನನಲ್ಲಿ ಅವಕಾಶ ನೀಡಿದ್ದರು. ಆದರೆ, 2 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಕೆಲವರು ಜಮೀನಿನಲ್ಲಿ ತ್ಯಾಜ್ಯವನ್ನು ಸುರಿಯಲಾರಂಭಿಸಿದರು.

ಇದರಿಂದ ಬೇಸತ್ತ ಕುಮಾರ್ ಜಮೀನಿನಲ್ಲಿ ಕೃಷಿ ಮಾಡಲು ಮುಂದಾಗಿದ್ದು ವಾಹನಗಳು ಸಂಚರಿಸಿದಂತೆ ಗುಂಡಿ ತೆಗೆದಿದ್ದಾರೆ. ಪರಿಣಾಮ ಬೈಕ್ ಹಾಗೂ ಕಾರುಗಳು ತಟ್ಟೆಹಳ್ಳದ ಸಮೀಪದಲ್ಲೇ ಸಂಚರಿಸಿದರೆ, ಬಸ್ ಹಾಗೂ ಲಾರಿಗಳು ಉದ್ದನೂರು ಹಾಗೂ ಬೆಳತ್ತೂರು ಗ್ರಾಮದ ಮೂಲಕ ತೆರಳುವಂತಾಗಿದ್ದು ವಾಹನ ಸವಾರರು ತೊಂದರೆ ಅನುಭವಿಸಿದರು.


ಒತ್ತಾಯ: ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ 3 ವರ್ಷಗಳಾಗಿದ್ದು ಇನ್ನೂ ಪೂರ್ಣಗೊಂಡಿಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲ. ಇನ್ನಾದರೂ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಾಹನಗಳು ಸಂಚರಿಸುತ್ತಿದ್ದ ಜಮೀನಿನ ತಾತ್ಕಲಿಕ ರಸ್ತೆಯಲ್ಲಿ ಗುಂಡಿ ತೆಗೆದಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಧಿಕಾರಿಗಳನ್ನು ಕಳುಹಿಸಿ ಸರಿಪಡಿಸಲಾಗುವುದು. ಈಗಾಗಲೇ ಕ್ರಿಯಾ ಯೋಜನೆಯಂತೆ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಹೆಚ್ಚುವರಿ ಕಾಮಗಾರಿಗೆ ಅನುದಾನ ಅವಶ್ಯಕತೆ ಇರುವುದರಿಂದ ನನೆಗುದಿಗೆ ಬಿದ್ದಿದ್ದು ಅನುದಾನ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿ ಪೂರ್ಣಗೊಳಿಸಲಾಗುವುದು.
ಪುರುಷೋತ್ತಮ್, ಎಇಇ ಪಿಡಬ್ಲೂೃಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net