

ಶಿಡ್ಲಘಟ್ಟ: ಎಲ್ಲ ಕ್ಷೇತ್ರಗಳಂತೆ ರೇಷ್ಮೆಕೃಷಿ, ರೇಷ್ಮೆ ಉದ್ದಿಮೆಯಲ್ಲೂ ಸಮಸ್ಯೆಗಳಿವೆ. ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಮುಂದುವರಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ರೇಷ್ಮೆ ಉಪ ನಿರ್ದೇಶಕ ಎಸ್.ಭೋಜಣ್ಣ ರೈತರಿಗೆ ತಿಳಿಸಿದರು.
ದ್ವಿತಳಿ ರೇಷ್ಮೆ ಬೆಳೆ ಸಾಕಣೆಯಲ್ಲಿ ತಾಂತ್ರಿಕತೆಯ ಬಲವರ್ಧನೆಗಾಗಿ ತರಬೇತಿ ಹಾಗೂ ಚಳಿಗಾಲ, ಬೇಸಿಗೆ ಕಾಲದಲ್ಲಿ ರೇಷ್ಮೆ ಹುಳು ಹಾಗೂ ಹಿಪ್ಪುನೇರಳೆ ಸೊಪ್ಪಿಗೆ ಕಾಡುವ ರೋಗ ಹಾಗೂ ಕೀಟ ಬಾಧೆ ಹತೋಟಿ ಕ್ರಮಗಳ ಬಗ್ಗೆ ತಾಲೂಕಿನ ಅಬ್ಲೂಡು ಗ್ರಾಮದಲ್ಲಿ ಮಂಗಳವಾರ ರೇಷ್ಮೆ ಬೆಳೆಗಾರರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ರೇಷ್ಮೆ ಹುಳು, ಹಿಪ್ಪುನೇರಳೆ ಸೊಪ್ಪಿಗೆ ಚಳಿಗಾಲ, ಬೇಸಿಗೆ ಕಾಲ, ಮಳೆಗಾಲ ಸೇರಿ ವರ್ಷವಿಡೀ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಕ್ರಿಮಿಕೀಟಗಳ ರೋಗಗಳು ಬಾಧಿಸುತ್ತವೆ. ಅವೆಲ್ಲವನ್ನೂ ನಿವಾರಿಸಿದರೆ ಮಾತ್ರವೇ ಉತ್ತಮ ಬೆಳೆ ತೆಗೆಯಲು ಸಾಧ್ಯ ಎಂದರು.
ಮುಖ್ಯವಾಗಿ ರೇಷ್ಮೆ ಹುಳು ಸಾಕಣೆ ಮನೆಯನ್ನು ಸೋಂಕು ರಹಿತವಾಗಿ ನಿರ್ವಹಣೆ ಮಾಡುವುದರಿಂದ ಯಶಸ್ಸಿನ ಒಂದು ಮೆಟ್ಟಿಲು ಹತ್ತಿದಂತೆ, ಉತ್ತಮ ತಳಿಯ ಚಾಕಿ ಹುಳುಗಳನ್ನು ಆಯ್ಕೆ ಮಾಡುವುದು ನಂತರದಲ್ಲಿ ಮಾಡುವ ಮತ್ತೊಂದು ಮುಖ್ಯ ಕೆಲಸ. ಕೊಟ್ಟಿಗೆ ಗೊಬ್ಬರ ಹಾಕಿ ಅಗತ್ಯಕ್ಕೆ ತಕ್ಕಂತೆ ಮಾತ್ರ ರಸಗೊಬ್ಬರ ನೀಡಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುವುದು. ಈ ಮೂರು ಹಂತದಲ್ಲಿ ಎಚ್ಚರಿಕೆ ವಹಿಸಿದರೆ ಉತ್ತಮ ಹಿಪ್ಪುನೇರಳೆ, ಉತ್ತಮ ರೇಷ್ಮೆ ಬೆಳೆಯಬಹುದು ಎಂದು ತಿಳಿಸಿದರು.
ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಅಕ್ಮಲ್ ಪಾಷಾ ಮಾತನಾಡಿ, ರೇಷ್ಮೆ ಹುಳುಗಳು ಹಣ್ಣಾಗುವವರೆಗೂ ವಹಿಸುವ ಎಚ್ಚರಿಕೆ, ಪಡುವ ಶ್ರಮ ರೇಷ್ಮೆ ಹುಳುಗಳು ಹಣ್ಣಾಗಿ ಚಂದ್ರಿಕೆಗೆ ಹಾಕಿದ ನಂತರ ರೈತರು ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಡೇ ಅವಧಿಯಲ್ಲಿ ನಿರ್ಲಕ್ಷ್ಯದಿಂದಾಗಿ ನಿರೀಕ್ಷಿತ ಗುಣಮಟ್ಟದ ರೇಷ್ಮೆಗೂಡು ಕೈಗೆ ಸಿಗುವುದಿಲ್ಲ ಹಾಗೂ ಬೆಲೆಯೂ ಸಿಗುವುದಿಲ್ಲ ಎಂದು ಹೇಳಿದರು.
ರೇಷ್ಮೆಗೂಡು ಮಾರುಕಟ್ಟೆಗೆ ಆವಕವಾದ ರೇಷ್ಮೆಗೂಡು ಮಾರಾಟವಾಗದೆ ವಾಪಸ್ ಆದ ದಾಖಲೆಯೇ ಇಲ್ಲ. ಪ್ರತಿ ಗೂಡಿಗೂ ಅದರ ಗುಣಮಟ್ಟದ ಮೇಲೆ ಬೆಲೆ ನಿರ್ಧಾರವಾಗಲಿದೆ. ಜಲ್ಲಿಗೂಡು, ಗಂಟುಗೂಡು ಮತ್ತು ಉತ್ತಮ ಗುಣಮಟ್ಟದ ಗೂಡನ್ನು ಗ್ರೇಡಿಂಗ್ ಮಾಡಿ ತನ್ನಿ ಎಂದು ವಿವರಿಸಿದರು.
ರೇಷ್ಮೆ ಬೆಳೆಗಾರರು ದ್ವಿತಳಿ ರೇಷ್ಮೆ ಹುಳು ಸಾಕಣೆ, ರೇಷ್ಮೆಗೂಡು ಬೆಳೆಯುವ ಬಗ್ಗೆ ತಮ್ಮಲ್ಲಿನ ಅನುಮಾನಗಳನ್ನು ಕೇಳಿ ಪರಿಹರಿಸಿಕೊಂಡರು.
ತಲಘಟ್ಟಪುರದ ರೇಷ್ಮೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಡಾ. ಅರುಣ, ಡಾ.ಬಿ.ಕೆ.ಪ್ರಕಾಶ್, ರೇಷ್ಮೆ ವಿಸ್ತರಣಾಧಿಕಾರಿ ಎಚ್.ಟಿ.ತಿಮ್ಮಪ್ಪ ಹಾಜರಿದ್ದರು.
2-3 ದಿನಕ್ಕೆ ಗೂಡು ಬಿಡಿಸಬೇಡಿ
ಸಾಕಷ್ಟು ರೈತರು ಹಣ್ಣಾದ ರೇಷ್ಮೆ ಹುಳುಗಳನ್ನು ಚಂದ್ರಿಕೆಗೆ ಹಾಕಿದ ನಂತರ ಚಂದ್ರಿಕೆಗಳಿಗೆ ಡಿಮಾಂಡ್ ಇದೆ ಅಂತಲೋ, ಚಂದ್ರಿಕೆ ಶೆಡ್‌ನಲ್ಲಿ ಜಾಗ ಇಲ್ಲ ಎಂದು ಅಥವಾ ಚಂದ್ರಿಕೆಗಳಿಗೆ ಬಾಡಿಗೆ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೋ ಏನೋ ಎರಡು ಮೂರು ದಿನಕ್ಕೆಲ್ಲಾ ರೇಷ್ಮೆಗೂಡನ್ನು ಬಿಡಿಸಿಬಿಡುತ್ತಿದ್ದಾರೆ. ಚಳಿಗಾಲದಲ್ಲಿ ಹಣ್ಣಾದ ರೇಷ್ಮೆಹುಳು ಗೂಡು ಕಟ್ಟಲು ಆರಂಭಿಸುವುದೇ ಬಹಳ ತಡ ಮತ್ತು ಗೂಡು ಕಟ್ಟುವುದು ಒಂದು ದಿನ ತಡವಾಗುತ್ತದೆ. ಆದರೆ ರೈತರು ಎರಡು - ಮೂರನೇ ದಿನವೇ ರೇಷ್ಮೆಗೂಡನ್ನು ಚಂದ್ರಿಕೆಯಿಂದ ಬಿಡಿಸುವುದರಿಂದ ರೇಷ್ಮೆಗೂಡಿನ ಒಳಗಿನ ಪ್ಯೂಪಾ ಸಾಯುತ್ತದೆ. ಹಾಗಾಗಿ ರೇಷ್ಮೆಗೂಡು ಕಟ್ಟುವ ಕಾರ್ಯ ನಿಲ್ಲುವುದರಿಂದ ಗೂಡಿನ ಗುಣಮಟ್ಟ ಕುಸಿಯುತ್ತದೆ. ಹಾಗಾಗಿ ಐದಾರು ದಿನದ ನಂತರ ರೇಷ್ಮೆಗೂಡನ್ನು ಬಿಡಿಸಿ ಮತ್ತು ರೇಷ್ಮೆಗೂಡು ಮಾರುಕಟ್ಟೆಗೆ ಬರುವಾಗ ರೇಷ್ಮೆಗೂಡನ್ನು ಗುಣಮಟ್ಟದ ಆಧಾರದಲ್ಲಿ ಗ್ರೇಡಿಂಗ್ ಮಾಡಿ ತನ್ನಿ, ಆರು ಏಳು ದಿನದ ರೇಷ್ಮೆಗೂಡನ್ನು ಮಾತ್ರವೇ ಮಾರುಕಟ್ಟೆಗೆ ತನ್ನಿ ಎಂದು ಎಂದು ಅಕ್ಮಲ್ ಪಾಷಾ ಮನವಿ ಮಾಡಿದರು.