ಋಣ ತೀರಿಸಲು ಕೈ ಪರ ಪ್ರಚಾರ

ಋಣ ತೀರಿಸಲು ಕೈ ಪರ ಪ್ರಚಾರ
Published on

ನಾಗಮಂಗಲ: ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ನಮ್ಮ ಬೆನ್ನಿಗೆ ನಿಂತು ಸಹಾಯ ಮಾಡಿದ್ದರು. ಅದರ ಋಣ ತೀರಿಸುವ ಸಲುವಾಗಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ ಎಂದು ಚಿತ್ರ ನಟ ದರ್ಶನ್ ಹೇಳಿದರು.

ತಾಲೂಕಿನ ವಿವಿಧೆಡೆ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿ, ಚಲುವರಾಯಸ್ವಾಮಿ ನಮ್ಮ ಹಿಂದೆ ನಿಂತದರ ಫಲವಾಗಿಯೇ ಅಮ್ಮ ಚುನಾವಣೆಯಲ್ಲಿ ಗೆಲ್ಲಲು ಸಹಕಾರಿಯಾಯಿತು. ಆ ಋಣವನ್ನು ನಾನು ಸಾಯುವವರೆಗೆ ಮರೆಯಲು ಸಾಧ್ಯವಿಲ್ಲ. ಮಂಡ್ಯ ಜಿಲ್ಲೆಯ ಜನತೆ ಸ್ಟಾರ್‌ಚಂದ್ರು ಅವರಿಗೆ ಮತ ಚಲಾಯಿಸುವ ಮೂಲಕ ಚಲುವಣ್ಣ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಜಿಲ್ಲೆ ಮತ್ತು ನಾಗಮಂಗಲ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಎಲ್ಲ ರಸ್ತೆಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ. ಚುನಾವಣೆ ಮುಗಿದ ಬಳಿಕ ಕಾಮಗಾರಿಗಳು ಆರಂಭವಾಗುತ್ತವೆ. ಈಗಾಗಲೇ ರಾಜ್ಯ ಸರ್ಕಾರದ ಗ್ಯಾರಂಟಿಗಳು ಪ್ರತಿಯೊಂದು ಕುಟುಂಬಕ್ಕೂ ತಲುಪುತ್ತಿವೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದರೆ ಮತಷ್ಟು ಗ್ಯಾರಂಟಿ ಯೋಜನೆಗಳು ಜನರಿಗೆ ಸಿಗಲಿವೆ. ನಿಮ್ಮ ಬೂತ್‌ಗಳಲ್ಲಿ ಜೆಡಿಎಸ್ ಇರಲೇ ಬಾರದು. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಆಮ್‌ಆದ್ಮಿ ಪಾರ್ಟಿ ಅಧ್ಯಕ್ಷ, ಚಿತ್ರನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಮನಗರ, ಚನ್ನಪಟ್ಟಣ, ಮಂಡ್ಯ ಎಲ್ಲವೂ ಕುಮಾರಸ್ವಾಮಿಗೆ ಬೇಕು ಅಂತಾರೆ. ಎಲ್ಲ ಅವರಿಗೆ ಬೇಕಾದ್ರೆ ಮೋದಿಗೆ ಹೇಳಿ ಬಿಡಿಸಿಕೊಂಡ್ರೆ ಆಗ್ತಾ ಇತ್ತು. ತಾತ, ಮಗ, ಅಣ್ಣನ ಮಗ, ಅಳಿಯ ಎಲ್ಲರೂ ಜನಪ್ರತಿನಿಧಿಗಳೇ ಆಗಿದ್ದಾರೆ. ಹೀಗಾದ್ರೆ ಚುನಾವಣೆ ಯಾಕೆ ಬೇಕು. ಮಂಡ್ಯದಲ್ಲಿ ಇವರು ಗೆದ್ರೆ ಚನ್ನಪಟ್ಟಣದಲ್ಲಿ ಇನ್ನೊಂದು ಚುನಾವಣೆ ಆಗಬೇಕು. ಆಗ ಎಲಿಜಬಿಲಿಟಿ ಇದ್ರೆ ಮರಿ ಮೊಮ್ಮಗನನ್ನು ನಿಲ್ಲಿಸುತ್ತಾರೆ ಅನ್ನಿಸುತ್ತೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್‌ಚಂದ್ರು ಮಾತನಾಡಿ, ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ನೀಡಿ. ಹೆಚ್ಚು ಮತ ನೀಡಿ ಗೆಲ್ಲಿಸಿಕೊಡಿ ಎಂದು ಮತಯಾಚಿಸಿದರು. ತಾಲೂಕಿನ ಬೆಳ್ಳೂರು, ಕದಬಹಳ್ಳಿ, ಬಿಂಡಿಗನವಿಲೆ, ಅದ್ದಿಹಳ್ಳಿ ಸರ್ಕಲ್, ಮಾಯಿಗೋನಹಳ್ಳಿ, ನಾಗಮಂಗಲ ಟೌನ್, ದೇವಲಾಪುರ ಹಾಗೂ ಚಿಣ್ಯ ಸರ್ಕಲ್‌ನಲ್ಲಿ ರೋಡ್‌ಶೋ ಮೂಲಕ ಪ್ರಚಾರ ನಡೆಸಲಾಯಿತು. ಮಾಜಿ ಎಂಎಲ್ಸಿ ಎನ್.ಅಪ್ಪಾಜಿಗೌಡ, ಮುಖಂಡ ಸುನೀಲ್, ಲಕ್ಷ್ಮೀಕಾಂತ್, ಸಚಿನ್ ಚಲುವರಾಯಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net