ಆಲೂರು ನಾಗಪ್ಪ 'ಸಾಹಿತ್ಯ ಪರಿಚಾರಕ': ಪ್ರೊ.ದೊಡ್ಡರಂಗೇಗೌಡ ಬಣ್ಣನೆ

Alur Nagappa
Published on

ಬೆಂಗಳೂರು: ಹಳ್ಳಿ ಹಳ್ಳಿಗಳಿಗೆ ತೆರಳಿ ಸಂಸತಿಯನ್ನು ಪ್ರಚಾರ ಮಾಡುವ ಮೂಲಕ ಆಲೂರು ನಾಗಪ್ಪ ಸಾಹಿತ್ಯ ಪರಿಚಾರಕರಾಗಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ.ಡೊಡ್ಡರಂಗೇಗೌಡ ಬಣ್ಣಿಸಿದ್ದಾರೆ.

ಆಲೂರು ನಾಗಪ್ಪ ಪ್ರತಿಷ್ಠಾನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್​ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ 'ಆಲೂರು ನಾಗಪ್ಪನವರಿಗೆ ನುಡಿ-ಗಾನ ನಮನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹರಿವ ನೀರನಂತಿದ್ದ ಆಲೂರು ನಾಗಪ್ಪ, ಊರಿಂದ ಊರಿಗೆ ಸಾಗುತ್ತಾ ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಹೊಸಹೊಸ ಹಾಡುಗಳನ್ನು ಕಟ್ಟುತ್ತಾ ಜನರನ್ನು ರಂಜಿಸುತ್ತಿದ್ದರು. ಈ ಮೂಲಕ ಸಂಸತಿಯನ್ನು ಬೆಳೆಸಿದರು. ಶುದ್ಧ ಅಭಿರುಚಿ ಹೊಂದಿದ್ದ ಅವರ ಮಾತಿನಲ್ಲಿ ಅಪ್ಪಟ ಕನ್ನಡದ ನುಡಿಗಟ್ಟು ವ್ಯಕ್ತವಾಗುತ್ತಿತ್ತು. ಹೀಗಾಗಿ ಅವರು ದೇಸಿ ಸಂಸತಿಯ ವಕ್ತಾರರಂತೆ ಭಾಸವಾಗುತ್ತಾರೆ. ವಿನಯವಂತಿಕೆ, ಅವರ ವ್ಯಕ್ತಿತ್ವಕ್ಕೆ ಶೋಭೆ ತರುತ್ತಿತ್ತು. ನನ್ನ ಮತ್ತು ಅವರ ಮಾತು ಸಾಹಿತ್ಯ ಮತ್ತು ಸಂಗೀತದ ಕಡೆಗೆ ಸಾಗುತ್ತಿತ್ತು. ನೂರಾರು ಹಾಡುಗಳನ್ನು ರಚನೆ ಮಾಡುತ್ತಿದ್ದರೂ, ವೇದಿಕೆಯಲ್ಲಿ ಜಾನಪದ ಎಂದು ಹೇಳಿಕೊಳ್ಳುತ್ತಿದ್ದರು ಎಂದು ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಮಾತನಾಡಿ, ಆಲೂರು ನಾಗಪ್ಪ ಕನ್ನಡ ನಾಡು ಕಂಡ ಜಾನಪದ ಜಂಗಮ. ಹೋರಾಟಗಾರ, ಸಾಹಿತಿ, ಗಾಯಕ, ಸಾಮಾಜಿಕ-ಧಾರ್ಮಿಕ ಚಿಂತಕರಾಗಿ ನಾಡಿಗಾಗಿ ಸೇವೆ ಸಲ್ಲಿಸಿದ್ದಾರೆ. ನೇರನುಡಿ ಹೊಂದಿದ್ದ ಅವರು, ಅಭಿಪ್ರಾಯಗಳನ್ನು ಎದೆಗಾರಿಕೆಯಿಂದ ವ್ಯಕ್ತಪಡಿಸುತ್ತಿದ್ದರು. ಹೋರಾಟಗಾರನಾಗಿ ಅವರಲ್ಲಿದ್ದ ಕಿಚ್ಚು, ಪ್ರತಿಯೊಬ್ಬರಲ್ಲೂ ವ್ಯಕ್ತವಾದರೆ ನಾಡು&ನುಡಿ ವಿಚಾರದಲ್ಲಿ ಯಾವುದೇ ಸಮಸ್ಯೆಯಾಗದು ಎಂದರು.

ಕಾರ್ಯಕ್ರಮದಲ್ಲಿ ಆಲೂರು ನಾಗಪ್ಪ ಅವರ 'ಕ್ಯಾಸೆಟ್​ ಕವಿತೆಗಳು' ಹಾಗೂ 'ಸೀಟಿ ಊದಲು ಗಾಡಿ ಬರುವುದು' ಹಾಡು ಬಿಡುಗಡೆಗೊಂಡಿತು. ಡಾ.ಶಮಿತಾ ಮಲ್ನಾಡ್​, ಮಾನಸ ಹೊಳ್ಳ ಇತರೆ ಗಾಯಕ-ಗಾಯಕಿಯರಿಂದ ಆಲೂರು ನಾಗಪ್ಪ ಅವರಿಗೆ ಗಾನ ನಮನ ನಡೆಯಿತು.

ಜಾನಪದ ಪರಿಷತ್​ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ, ಮಾಜಿ ಶಾಸಕ ಎ.ಮಂಜುನಾಥ್​, ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್​, ಕೆ.ಎಂ.ಎಫ್​ ಮಾಜಿ ಅಧ್ಯಕ್ಷ ಪಿ.ನಾಗರಾಜು, ಪ್ರಕಾಶಕ ವೀರಕಪುತ್ರ ಶ್ರೀನಿವಾಸ್​, ದಿವ್ಯಾ ಆಲೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net