

ಕಲಬುರಗಿ: ರಾಜ್ಯ ವಿಧಾನಸಭೆ ಚುನಾವನೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡದೆ ರಾಜ್ಯದ ಜನತೆಯೆ ಮೇಲೆ ತನ್ನ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಪ್ರಿಯಾಂಕ ಕಾಂಗ್ರೆಸ್ ಸರ್ಕಾರದ ಯೋಜನೆಗೆ ಕೇಂದ್ರ ಅಡ್ಡಗಾಲು ಹಾಕುವ ಮೂಲಕ ಕುತಂತ್ರ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ಧಾರೆ.
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ಐದು ಕೆಜಿ, ಕೇಂದ್ರದ ವತಿಯಿಂದ ನೀಡಲಾಗುವ ಐದು 5 ಕೆಜಿ ಸೇರಿಸಿ ಒಟ್ಟು 10 ಕೆಜಿ ಅಕ್ಕಿಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಜನತೆಗೆ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೂನ್ 02ರಂದು ನಡೆದ ಸಚಿವ ಸಂಪುಟ ಸಭೆ ಬಳಿಕ ತಿಳಿಸಿದ್ದರು.
ಅದರಂತೆ, ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದು ಯೋಜನೆಗೆ ಬೇಕಾಗಿರುವ 2.28ಲಕ್ಷ ಟನ್ ಅಕ್ಕಿ ಸರಬರಾಜು ಮಾಡುವಂತೆ ಕೋರಿರುತ್ತಾರೆ. ಮೊದಲು ಅಕ್ಕಿ ಸರಬರಾಜು ಮಾಡಲು ಒಪ್ಪಿದ ಅಧಿಕಾರಿಗಳು ಆ ನಂತರ ಉಲ್ಟಾ ಹೊಡೆದಿದ್ದಾರೆ. ಈಗಾಗಲೇ ಗೋದಾಮಿನಲ್ಲಿ ಸಾಕಷ್ಟು ಅಕ್ಕಿಯನ್ನು ದಾಸ್ತಾನು ಮಾಡಲಾಗಿದ್ದು, ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡದೆ ಖಾಸಗಿಯವರಿಗೆ ನೀಡಲು ಮುಂದಾಗಿರುವುದು ನೋಡಿದರೆ ದ್ವೇಷ ರಾಜಕಾರಣ ಅಲ್ಲದೇ ಇನ್ನೇನು ಎಂದು ಕಿಡಿಕಾರಿದ್ಧಾರೆ.