

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಸತ್ಯ ಹೊರಬರಲು ತನಿಖೆ ನಡೆಯುತ್ತಿಲ್ಲ. ಪ್ರಕರಣ ಮುಚ್ಚಿಹಾಕಲು ತನಿಖೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ನಾಲ್ಕು ಪ್ರಶ್ನೆಗಳನ್ನು ಹಾಕಿರುವ ಖರ್ಗೆ, ಈ ವಿಚಾರದಲ್ಲಿ ಸಿಟ್ಟಿಂಗ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.
ಇಂದು ವಕೀಲ ಎ.ಎಸ್.ಪೊನ್ನಣ್ಣ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ ಖರ್ಗೆ, ಬಿಟ್ಕಾಯಿನ್ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಕೃಷ್ಣ ಮತ್ತು ರಬಿನ್ ಖಂಡೇವಾಲ ಹೊಟೇಲ್ ಮೌರ್ಯದಲ್ಲಿ ಮೊದಲ ಬಾರಿ ನವೆಂಬರ್ 2020 ರಲ್ಲಿ ಸಿಸಿಬಿ ಸರೆಂಡರ್ ಆಗ್ತಾರೆ. ಆವಾಗಿನಿಂದ ಹಲವು ಕೇಸುಗಳಲ್ಲಿ ಶ್ರೀಕಿಯನ್ನು ಬಿಡುವುದು ಮತ್ತೆ ಹೊಸ ಕೇಸ್ ಹಾಕಿ ಒಳಗೆ ಹಾಕುವುದು ನಡೆಯುತ್ತಿದೆ. ಇದು ಯಾಕೆ ಅನ್ನೋದನ್ನ ಅಧಿಕಾರಿಗಳು ಜನರಿಗೆ ತಿಳಿಸಬೇಕು ಎಂದರು.
ಈ ವರ್ಷದ ಜನವರಿಯಲ್ಲೇ ಶ್ರೀಕಿ ವಿರುದ್ಧ ಸಿಸಿಬಿ ತನಿಖಾಧಿಕಾರಿ ಶ್ರೀಧರ್ ಪೂಜಾರ್ ಸಲ್ಲಿಸಿರುವ ದೂರಿನಲ್ಲಿ ಬಿಟ್ ಕಾಯಿನ್ ಪ್ರಸ್ತಾಪ ಇದೆ. ಬೇರೆಯವರ ಅಕೌಂಟಿಂದ ಬಿಟ್ ಕಾಯಿನ್ಸ್ ತೊಗೊಂಡಿದ್ದಾರೆ. ಬಿಟ್ಕಾಯಿನ್ ಮಾರಾಟಕ್ಕೆ ಹವಾಲಾ ವ್ಯವಹಾರ ಮಾಡಿದಾರೆ ಎಂದು ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಈಗಲೂ ಸಹ ಇಡಿ ತನಿಖೆಗೆ ಕೊಟ್ಟಿಲ್ಲ ಎಂದು ಖರ್ಗೆ ಆಕ್ಷೇಪಿಸಿದರು.
ನಲಪಾಡ್ ಆರೋಪಿಗೆ ಪರಿಚಯ ಇರೋದು ಒಂದು ಪ್ಯಾರಾಗ್ರಾಫ್ನಲ್ಲಿ ಇದೆ. ಉಳಿಕೆ ಎಲ್ಲವೂ ಬಿಜೆಪಿ ಅವರದ್ದೇ. ಅದಕ್ಕಾಗೇ ಕೇಸ್ ದಿಕ್ಕು ತಪ್ಪಿಸುವ ಕೆಲಸ ಬಿಜೆಪಿ ಮಾಡ್ತಿದೆ ಎಂದು ಆರೋಪಿಸಿದ ಖರ್ಗೆ, "ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ. ಆಮೇಲೆ ಮೂರನೇ ಮುಖ್ಯಮಂತ್ರಿ ಆಗಬೇಕಾ.. ನೀವೇ(ಬೊಮ್ಮಾಯಿ) ಮುಂದೂವರೆಯಬೇಕಾ ಅನ್ನೋದನ್ನ ನಿಮ್ಮ ವರಿಷ್ಠರು ನಿರ್ಧಾರ ಮಾಡ್ಲಿ" ಎಂದು ಕುಟುಕಿದರು.
ಶ್ರೀಕಿ ತಂದೆ ರಾಜ್ಯ ಸರ್ಕಾರದ ಬಗ್ಗೆ ಅವಿಶ್ವಾಸ ತೋರಿ ಸಿಬಿಐ ತನಿಖೆಗೆ ಕೋರಿದ್ದರು. ಬೆಂಗಳೂರು ಕಮಿಷನರ್ ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಗರಣ ನಡೆದಿದೆ, ಸೂಕ್ತ ತನಿಖೆ ನಡೆಸಲು ಸಹಕಾರ ಕೊಡಿ ಎಂದು ಇಂಟರ್ ಪೋಲ್ನವರಿಗೆ ಪತ್ರ ಬರೆದಿದ್ದರು. ಇಷ್ಟೆಲ್ಲಾ ಆದ್ರೂ ಸರ್ಕಾರ ಸಿಬಿಐ, ಇಡಿಗೆ ಯಾಕೆ ಬರೆಯಲಿಲ್ಲ ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ಖರ್ಗೆ ಪ್ರಶ್ನೆಗಳು:
1. ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗ ಶ್ರೀಕಿ ಡ್ರಗ್ಸ್ ತೆಗೆದುಕೊಂಡಿದ್ದಾರಾ..? ತನಿಖೆ ಆಗಬೇಕು.. ಯಾರು ಯಾಕೆ ಕೊಟ್ರು ಎಂದು ತನಿಖೆ ಆಗಬೇಕು.
2. 38.8 ಬಿಟ್ ಕಾಯಿನ್ ಮಿಸ್ ಆಗಿದೆ. ಎಲ್ಲಿ ಹೋಯಿತು? ನೂರು ಕೋಟಿ ಮೌಲ್ಯ ಅಂತ ತಜ್ಞರು ಎಂದು ಹೇಳ್ತಿದ್ದೀರಿ ಯಾವ ರೀತಿ?
3. ಐದು ಸಾವಿರ ಕಾಯಿನ್ ಹ್ಯಾಕ್ ಮಾಡಿದ್ದೇನೆಂದು ತನಿಖಾಧಿಕಾರಿ ಮುಂದೆ ಒಪ್ಪಿಕೊಂಡಿದ್ದಾರೆ. ಆದ್ರೆ ಇದು ಚಾರ್ಜ್ ಶೀಟಲ್ಲಿ ಯಾವುದೂ ಇಲ್ಲ ಯಾಕೆ?
4. ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ತಡ ಮಾಡಿದ್ದು ಯಾಕೆ? ಸಿಬಿಐ ಇಡಿಗೆ ಯಾಕೆ ಇನ್ಪರ್ಮ್ ಮಾಡಲಿಲ್ಲ? ಅವನೇ ಒಪ್ಪಿಕೊಂಡರು ತನಿಖೆ ನಿಧಾನ ಮಾಡಿದ್ದು ಯಾಕೆ?